ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಸೇರ್ಪಡೆ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ವರಿಷ್ಠರಿಗೆ ಸಲ್ಲಿಸಲಾಗಿದ್ದು ಇನ್ನು ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದು, ಪ್ರಮೋದ್ ಪಕ್ಷ ಸೇರ್ಪಡೆಯಾಗಲು ಯಾವುದೇ ಹುದ್ದೆಯ ಷರತ್ತು ಹಾಕಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ ಪಕ್ಷದ ಸಿದ್ದಾಂತವನ್ನು ನಂಬಿ ಬರುವವರಿಗೆ ಪಕ್ಷದ ಬಾಗಿಲು ಯಾವತ್ತೂ ಮುಚ್ಚಿಲ್ಲ, ಯಾವುದೇ ಹುದ್ದೆಯ ನಿರೀಕ್ಷೆಯಿಲ್ಲದೆ ಬರುವ ಇಂಗಿತವನ್ನು ಮಾಜಿ ಸಚಿವರು ವ್ಯಕ್ತಪಡಿಸಿದ್ದು, ರಾಜ್ಯಾಧ್ಯಕ್ಷ ಮತ್ತು ಜಿಲ್ಲಾ ನಾಯಕರ ಮಧ್ಯೆ ಒಂದು ಹಂತದ ಮಾತುಕತೆ ನಡೆದಿದ್ದು ಅವರನ್ನು ಯಾವಾಗ ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವುದರ ಕುರಿತು ರಾಜ್ಯ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ.
ಪ್ರಮೋದ್ ಪಕ್ಷಕ್ಕೆ ಬರುವ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಅಸಮಾಧಾನವಿದ್ದರೆ, ಅದಕ್ಕೆ ರಾಜ್ಯ ವರಿಷ್ಠರು ಸೂಕ್ತ ವ್ಯವಸ್ಥೆ ಮಾಡಲಿದ್ದಾರೆ. ಒಬ್ಬ ವ್ಯಕ್ತಿ ಪಕ್ಷಕ್ಕೆ ಬರುವ ಸಮಯದಲ್ಲಿ ವಿರೋಧಗಳು ಸಹಜ ಆದರೆ ಬಳಿಕ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕೆನ್ನುವುದು ಪಕ್ಷದ ಸಿದ್ದಾಂತವಾಗಿದೆ ಎಂದರು.