ಉಡುಪಿ: ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಕೋಣೆಯ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದಾಗಲೇ ತನ್ನ ಸೇವಾ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ಅವರ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರಾಜೇಶ್ ಕುಂದರ್ ತಮ್ಮ ಸಹೋದ್ಯೋಗಿಗಳ ಕಿರುಕುಳದ ವಿರುದ್ದ ದೂರು ನೀಡಿದ್ದಾರೆನ್ನಲಾಗುವ ಆಡಿಯೋ ಕ್ಲಿಪ್ ಗಳು ಪೋಲೀಸರ ವಶವಾಗಿದೆ.
ಮೊದಲನೆ ಆಡಿಯೋದಲ್ಲಿ ಹಿಜಾಬ್ ಗಲಾಟೆ ಸಂದರ್ಭ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ರಾಜೇಶ್ ಕೈಕೆಳಗೆ ಇಬ್ಬರು ಸಿಬ್ಬಂದಿ ಅಶ್ಫಾಕ್ ಮತ್ತು ಉಮೇಶ್ ಎಂಬವರು ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರಾದ ಬಗ್ಗೆ ಡಿಎಆರ್ ಕೇಂದ್ರ ಕಚೇರಿಗೆ ನೀಡಿದ ದೂರಿನ ಆಡಿಯೋ ಕ್ಲಿಪ್ ರೆಕಾರ್ಡ್ ಆಗಿದೆ.
ಎರಡನೇ ಆಡಿಯೋದಲ್ಲಿ ಅಶ್ಫಾಕ್ ಮತ್ತು ಉಮೇಶ್ ಇಬ್ಬರೂ ಸೇರಿ ಮಲಗಿದ್ದ ರಾಜೇಶ್ ಮೇಲೆ ಹಲ್ಲೆ ನಡೆಸಿದ್ದು, ಅಲ್ಲಿಂದ ತಪ್ಪಿಸಿಕೊಂಡು ಬರಿ ಮೈಯಲ್ಲಿ ವಾಹನವಿಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಬಗ್ಗೆ ಹೇಳಿದ್ದಾರೆ. ಆಪಾದಿತರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂಟ್ರೋಲ್ ರೂಮಿಗೆ ಕರೆ ಮಾಡಿದ್ದು, ಸ್ಪಂದಿಸದಿದ್ದಲ್ಲಿ ತಾನು ಏನಾದರೂ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಆಡಿಯೋದಲ್ಲಿರುವ ಧ್ವನಿ ರಾಜೇಶ್ ಅವರದ್ದು ಎನ್ನುವುದನ್ನು ಖಚಿತ ಪಡಿಸಲು ಹೆಚ್ಚಿನ ತನಿಖೆಗೆ ಕಳುಹಿಸಲಾಗಿದೆ.