ಕೇಳುವವರಿಲ್ಲ ನಗರದ ಕ್ಲಾಕ್ ಟವರ್ ಗೋಳು: ಅವ್ಯವಸ್ಥೆಯ ವಿರುದ್ದ ಧ್ವನಿ ಎತ್ತಿದ ಜಿಲ್ಲಾ ನಾಗರಿಕ ಸಮಿತಿ

ಉಡುಪಿ: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಪರಿಸರ ಅವ್ಯವಸ್ಥೆಯ ಆಗರವಾಗಿದ್ದು, ಕೂಡಲೇ ಸಮಸ್ಯೆಯನ್ನು ಸರಿಪಡಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ನಗರಸಭೆಯನ್ನು ಆಗ್ರಹಿಸಿದ್ದಾರೆ.

ಗಡಿಯಾರ ಗೋಪುರದ ಬಳಿ ಅಳವಡಿಸಿದ್ದ ಸಾರ್ವಜನಿಕ ಕುಡಿಯುವ ನೀರಿನ ನಳ್ಳಿ ಹಾಳಾಗಿ ವರ್ಷಗಳು ಸಂದಿವೆ. ನೀರು ತಂಪಾಗಿಸುವ ಶೀತಲೀಕೃತ ಯಂತ್ರವು ಹಾಳಾಗಿ ತುಕ್ಕು ಹಿಡಿದಿದೆ. ಇದೀಗ ಈ ಕೊಠಡಿಯು ಕುಡುಕರ ಶೌಚಾಲಯವಾಗಿ ಮಾರ್ಪಟ್ಟಿದೆ. ಪ್ರಯಾಣಿಕರು, ಯಾತ್ರಾರ್ಥಿಗಳು, ಪ್ರವಾಸಿಗರು ಕುಡಿಯುವ ನೀರಿಗಾಗಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ಗೋಪುರದ ತಳಭಾಗದಲ್ಲಿ ಗಾಂಧಿ ಪ್ರತಿಮೆ ಇದ್ದು, ಅದರ ತಳದಲ್ಲಿ ಅಮೇಲೆರಿದ ಕುಡುಕರು ನಿದ್ರಿಸುತ್ತಿರುತ್ತಾರೆ. ಪರಿಸರದಲ್ಲಿ ಕಸ ತ್ಯಾಜ್ಯಗಳ ರಾಶಿ ಬಿದ್ದುಕೊಂಡಿದ್ದು ಪರಿಸರದಲ್ಲಿ ಗಬ್ಬು ವಾಸನೆ ಹರಡಿದೆ. ಗೋಪುರದ ಸುತ್ತಲೂ ಅಳವಡಿಸಿರುವ ಆವರಣ ಬೇಲಿಯನ್ನು ಕಿಡಿಗೇಡಿಗಳು ಘಾಸಿಗೊಳಿಸಿ, ಕಲ್ಲು ಕಂಬಗಳನ್ನು ಉರುಳಿಸಿದ್ದಾರೆ.

ನಗರಸಭೆ ಕೂಡಲೇ ಎಚ್ಚೆತ್ತು ಅಗತ್ಯ ಕ್ರಮಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಒತ್ತಾಯಿಸಿದೆ.