ಮಣ್ಣು ಉಳಿಸಿ ಜಾಗೃತಿ ಅಭಿಯಾನ

12 ಏಪ್ರಿಲ್ 2022 ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮಣ್ಣು ಉಳಿಸಿ ಅಭಿಯಾನ ಪ್ರಾರಂಭವಾಗಿದ್ದು, ಅಂದಿನಿಂದ ಹಲವಾರು ಕಡೆಗಳಲ್ಲಿ ಸಾಕಷ್ಟು ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

22 ಏಪ್ರಿಲ್ 2022 ರ, ವಿಶ್ವ ಭೂಮಿ ದಿನದಂದು ಉಡುಪಿಯ ಅಜ್ಜರಕಾಡು ಪಾರ್ಕ್‌ನಲ್ಲಿ ಬರಿಗಾಲಿನಲ್ಲಿ ನಡೆಯುವ ಮೂಲಕ ಪ್ರತಿಯೊಬ್ಬರೂ ಮಣ್ಣನ್ನು ಸ್ಪರ್ಶಿಸುವ ಅನುಭವವನ್ನು ಪಡೆದರು ಮತ್ತು ಮಣ್ಣಿನಿಂದ ಮೂರ್ತಿ ಮಾಡುವ ಸ್ಪರ್ಧೆಗಳು ಕೂಡಾ ನಡೆದವು. ಅಂದು ಭಾಗವಹಿಸಿದ ಪ್ರತಿಯೊಬ್ಬರ ಮಣ್ಣಿನ ಕೈಮುದ್ರೆಗಳನ್ನು ಬಿಳಿ ಬಟ್ಟೆಯಲ್ಲಿ ತೆಗೆದುಕೊಳ್ಳಲಾಗಿದ್ದು, ಅದನ್ನು ಶೀಘ್ರದಲ್ಲೇ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಹಂಚಿಕೊಳ್ಳಲಾಗುವುದು.

 

23 ಏಪ್ರಿಲ್ 22 ರಂದು ಮಣಿಪಾಲ ಕ್ರಿಕೆಟ್ ಕ್ಲಬ್ ವತಿಯಿಂದ ಶಾರದ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಕಾರ್ಯ್ರಮವೊಂದರಲ್ಲಿ ಮಣ್ಣು ಉಳಿಸಿ ಕಿರು ನಾಟಕವು ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಉಡುಪಿ ಮಣ್ಣು ಉಳಿಸಿ ಬಳಗದ ಸ್ವಯಂಸೇವಕರು ಈ ಕಿರುನಾಟಕವನ್ನು ಪ್ರದರ್ಶಿಸಿ ಜನರಿಗೆ ಈ ಅಭಿಯಾನದ ಮಹತ್ವದ ಕುರಿತು ತಿಳಿಸಿದರು.

ಆಂದೋಲನದ ಬಗ್ಗೆ ಜಾಗೃತಿ ಮೂಡಿಸಲು ಉಡುಪಿಯ ಮಣ್ಣು ಉಳಿಸಿ ಬಳಗದ ಸ್ವಯಂಸೇವಕರು ಹಲವಾರು ಶಾಲಾ ಕಾಲೇಜು ಮತ್ತು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳನ್ನು ನಡೆಸಲಾರಂಭಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.