ಬೆಂಗಳೂರು: 545 ಪಿ.ಎಸ್.ಐ ಹುದ್ದೆಗಳಿಗೆ ನಡೆಸಲಾಗಿದ್ದ ಪರೀಕ್ಷಾ ನೇಮಕಾತಿಯನ್ನು ರದ್ದುಪಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆರೋಪಿಗಳನ್ನು ಹೊರತುಪಡಿಸಿ, ಉಳಿದವರಿಗೆ ಶೀಘ್ರವೇ ಮರು ಪರೀಕ್ಷೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ. ಇದಲ್ಲದೆ ಇನ್ನಿತರ ಆರೋಪಿಗಳಾದ ಅರ್ಚನಾ, ದಿವ್ಯಾ, ಚಾಲಕ ಸದ್ದಾಂ, ಸುನಂದಾರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಇವರೆಲ್ಲರನ್ನೂ ರಾಜ್ಯಕ್ಕೆ ಕರೆತರಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಅವ್ಯವಹಾರ ನಡೆದಿರುವುದು ಮನದಟ್ಟಾಗಿದೆ. ಬೆಂಗಳೂರಿನ ಕೇಂದ್ರದಲ್ಲೂ ಹಗರಣ ನಡೆದಿರುವುದರಿಂದ ರಾಜ್ಯ ಸರ್ಕಾರವು ಇಡೀ ಪರೀಕ್ಷೆಯನ್ನೇ ರದ್ದುಪಡಿಸಿದೆ.
ಒಟ್ಟು 54,289 ಅಭ್ಯರ್ಥಿಗಳು ಪಿಎಸ್ಐ ಪರೀಕ್ಷೆಗೆ ಕುಳಿತಿದ್ದರು. ಅವರಿಗೆ ಇನ್ನೊಮ್ಮೆ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಅಪಾದಿತರನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಗೃಹ ಸಚಿವ ಮಾಧ್ಯಮಗಳಿಗೆ ತಿಳಿಸಿದ್ದಾರೆ.