ಕುಕ್ಕುಂದೂರು : ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕುಕ್ಕುಂದೂರು : ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಕುಕ್ಕುಂದೂರು ಗ್ರಾ.ಪಂ. ವ್ಯಾಪ್ತಿಯ ಜೋಡುರಸ್ತೆಯಲ್ಲಿ ಸುಮಾರು 6.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್‌ ಚರಂಡಿ, ಅಲಂಕಾರಿಕಾ ಬೀದಿ ದೀಪಗಳ ಅಳವಡಿಕೆ ಹಾಗೂ ಎರಡು ಬದಿಯ ಪಾದಾಚಾರಿ ಮಾರ್ಗಕ್ಕೆ ಇಂಟರ್‌ ಲಾಕ್‌ ಅಳವಡಿಕೆಯ ಕಾಮಗಾರಿಗೆ ಎ. 25 ರಂದು ಬೆಳಿಗ್ಗೆ 8 ಗಂಟೆಗೆ ಸಚಿವ ವಿ. ಸುನಿಲ್‌ ಕುಮಾರ್‌ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ ಪರಿಕಲ್ಪನೆಯಡಿ ಕ್ಷೇತ್ರಾದ್ಯಂತ ಸಮಾರೋಪಾದಿಯಲ್ಲಿ ಅಭಿವೃದ್ಧಿ ಚಟುವಟಿಕೆ ನಡೆಯುತ್ತಿದ್ದು, ನಗರಕ್ಕೆ ಅತಿ ಸನಿಹದಲ್ಲಿರುವ ಜೋಡುರಸ್ತೆ ಪೇಟೆಯು ಉಡುಪಿ ಮತ್ತು ಹೆಬ್ರಿ ಕೇಂದ್ರಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಹೊಂದಿದ್ದು, ಪ್ರಮುಖ ಉದ್ದಿಮೆಗಳು ಮತ್ತು ಇತರ ಸಂಸ್ಥೆಗಳು ಬೆಳೆಯುತ್ತಿರುವುದರಿಂದ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ನನ್ನ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಸ್ಥಳಾವಕಾಶ ಇರುವ ಕಾರ್ಕಳ ಪೇಟೆಯ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳು ಅಭಿವೃದ್ಧಿ ಹೊಂದಲಿದ್ದು ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದನೆ ಸಿಗಲಿದೆ ಎಂದರು.

ಗ್ರಾಮಸ್ಥರ ಪರವಾಗಿ ಸಚಿವರಿಗೆ ಫಲತಾಂಬೂಲ ಪುಷ್ಪನೀಡಿ ಅಭಿನಂದಿಸಲಾಯಿತು.

ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಶಶಿಮಣಿ, ಹಿರ್ಗಾನ ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಗುತ್ತಿಗೆದಾರ ಡಿ.ಆರ್.ರಾಜು, ನಿಕಟ ಪೂರ್ವ ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ, ಉದ್ಯಮಿ ರವಿಪ್ರಕಾಶ್‌ ಪ್ರಭು ಮತ್ತು ಸಚಿನ್‌ ಸಾಲಿಯಾನ್‌, ಅಂತೋನಿ ಡಿʼಸೋಜಾ ಹಾಗೂ ಕುಕ್ಕುಂದೂರು ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ತಾ.ಪಂ. ಮಾಜಿ ಉಪಾಧ್ಯಕ್ಷ ರವೀಂದ್ರ ಕುಮಾರ್‌ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕುಕ್ಕುಂದೂರು ನಿಕಟ ಪೂರ್ವ ಅಧ್ಯಕ್ಷೆ ಜ್ಯೋತಿ ರಮೇಶ್‌ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.