ಉಚಿತ ಪಡಿತರ ಚೀಟಿ ಹೊಸ ನಿಯಮ: ನಿರ್ಲಕ್ಷಿಸಿದರೆ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ತೊಂದರೆ

ಬೆಂಗಳೂರು: ಪಡಿತರ ಚೀಟಿ ವ್ಯವಸ್ಥೆಯಲ್ಲಿ ಕೆಲವು ಲೋಪದೋಷಗಳನ್ನು ಗಮನಿಸಿರುವ ಸರ್ಕಾರ ಕೆಲವು ಷರತ್ತುಗಳ ಅಡಿಯಲ್ಲಿ ಗ್ರಾಹಕರು ತಮ್ಮ ಪಡಿತರ ಚೀಟಿಗಳನ್ನು ಸರೆಂಡರ್ ಮಾಡಲು ಹೊಸ ನಿಯಮ ರೂಪಿಸಿದೆ. ಈ ನಿಯಮಗಳನ್ನು ನಿರ್ಲಕ್ಷಿಸಿದಲ್ಲಿ ಮುಂದಿನ ದಿನಗಳಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.

ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದೆಂದು ಸರ್ಕಾರದ ವತಿಯಿಂದ ನೀಡಲಾಗುವ ಉಚಿತ ಪಡಿತರದ ಪ್ರಯೋಜನ ಅರ್ಹರಿಗೆ ಲಭ್ಯವಾಗುವುದಕ್ಕಿಂತ ಹೆಚ್ಚಾಗಿ ಅನರ್ಹರೇ ಇದರ ಲಾಭವನ್ನು ಹೆಚ್ಚಾಗಿ ಪಡೆಯುತ್ತಿದ್ದಾರೆ ಎನ್ನುವುದು ಸರಕಾರದ ಗಮನಕ್ಕೆ ಬಂದಿದೆ. ಉಚಿತ ಪಡಿತರ ಯೋಜನೆಗೆ ಅರ್ಹರಲ್ಲದವರು ಕೂಡಲೇ ತಮ್ಮ ಪಡಿತರ ಚೀಟಿಯನ್ನು ಸ್ವಯಂ ಪ್ರೇರಿತರಾಗಿ ಮರಳಿಸುವಂತೆ ಅಧಿಕಾರಿಗಳ ಮೂಲಕ ಮನವಿ ಮಾಡಲಾಗುತ್ತಿದೆ.

ನಿಗದಿತ ಗಡುವಿನೊಳಗೆ ಅನರ್ಹರು ತಮ್ಮ ಪಡಿತರ ಚೀಟಿಯನ್ನು ಹಿಂದಿರುಗಿಸದಿದ್ದರೆ ಹಾಗೂ ತನಿಖೆ ವೇಳೆ ಪಡಿತರ ಯೋಜನೆಯ ಲಾಭವನ್ನು ಪಡೆಯಲು ಅರ್ಹರಲ್ಲದವರು ಯೋಜನೆಯ ಲಾಭ ಪಡೆಯುತ್ತಿರುವುದು ಪತ್ತೆಯಾದರೆ ಅಂತಹವರ ಪಡಿತರ ಚೀಟಿಯನ್ನು ಪರಿಶೀಲನೆಯ ನಂತರ ರದ್ದುಗೊಳಿಸಲಾಗುತ್ತದೆ. ಅಲ್ಲದೆ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ಆದಾಯ ವರ್ಷಕ್ಕೆ 2 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ ವಾರ್ಷಿಕ 3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳು ಈ ಯೋಜನೆಗೆ ಅನರ್ಹರಾಗಿರುತ್ತಾರೆ. ಇದಲ್ಲದೆ, 100 ಚದರ ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣದ ಮನೆ ಅಥವಾ ಫ್ಲಾಟ್, ನಾಲ್ಕು ಚಕ್ರದ ವಾಹನ ಹೊಂದಿದ್ದರೆ ಅಂತಹ ಜನರು ಉಚಿತ ಪಡಿತರ ಚೀಟಿಯನ್ನು ಪಡೆಯಲು ಅರ್ಹತೆ ಹೊಂದಿರುವುದಿಲ್ಲ.