ಕಾರ್ಕಳ: ಕಾರ್ಕಳ ತಾಲೂಕಿನಿಂದ ಬೇರ್ಪಟ್ಟು ಹೊಸದಾಗಿ ರಚನೆಗೊಂಡ ಹೆಬ್ರಿ ತಾಲೂಕಿಗೆ ಪೂರ್ಣ ಪ್ರಮಾಣದ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕಾರ್ಯಗತಗೊಳಿಸಿದೆ.
ನೂತನ ಹೆಬ್ರಿ ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ರೂ. 1.47 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಹೆಬ್ರಿ ತಾಲೂಕು ಪಂಚಾಯತ್ ಈಗ ಹೆಬ್ರಿ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ವಂತ ಕಟ್ಟಡ ಅತೀ ಶೀಘ್ರ ಮಾಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನಿಲ್ ಕುಮಾರ್ ರವರ ವಿಶೇಷ ಪ್ರಯತ್ನದಿಂದಾಗಿ ಇದೀಗ ಅನುದಾನ ಬಿಡುಗಡೆಗೊಂಡಿರುತ್ತದೆ.
ಕಾರ್ಕಳ ತಾಲೂಕು ಪಂಚಾಯತ್ ನೂತನ ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣದ ಚಿಂತನೆ ಹೊಂದಿರುವ ಮಾನ್ಯ ಸಚಿವರು ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದೆ.
ಕಾರ್ಕಳ ತಾಲೂಕು ಪಂಚಾಯತ್ ಕಟ್ಟಡ ಕಾಮಗಾರಿಗೂ ಹೆಚ್ಚುವರಿಯಾಗಿ ರೂ. 20 ಲಕ್ಷ ಅನುದಾನ ಬಿಡುಗಡೆಗೊಂಡಿರುತ್ತದೆ.
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಚ್ಚಿನ ಇಲಾಖೆಗಳಿಗೆ ಹೊಸ ಆಯಾಮವನ್ನು ನೀಡುತ್ತಿದ್ದು, ಹಂತ ಹಂತವಾಗಿ ಎಲ್ಲಾ ಇಲಾಖೆಗಳ ಕಟ್ಟಡ ಸೇರಿದಂತೆ ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಕ್ಷೇತ್ರದಲ್ಲಿ ಜನಪರ ಆಡಳಿತ ನೀಡುವಲ್ಲಿ ಮಾನ್ಯ ಸಚಿವರು ಕಾರ್ಯೋನ್ಮುಖರಾಗಿರುವುದು ಗಮನಾರ್ಹವಾಗಿದೆ.
ಇದೀಗ ಹೆಬ್ರಿ ತಾಲೂಕು ಕಛೇರಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ ಕಾರ್ಕಳ ತಾಲೂಕು ಕಛೇರಿಗೆ ಆಧುನಿಕ ಸ್ಪರ್ಶ ನೀಡುವ ನಿಟ್ಟಿನಲ್ಲಿ ಕಟ್ಟಡ ರಿಪೇರಿಗೆ ರೂ. 50 ಲಕ್ಷ ಈಗಾಗಲೇ ಬಿಡುಗಡೆಗೊಂಡಿದ್ದು, ಇನ್ನೂ 1 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಚಿವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.