ಉಡುಪಿ: ಸುಮಾರು ನಾಲ್ಕು ತಾಸಿನ ಗೊಂದಲದ ಬಳಿಕ ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ಕುಟುಂಬಸ್ಥರ ಒಪ್ಪಿಗೆಯಂತೆ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು.
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಪಂಚೆನಾಮೆ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಪೂರ್ಣಗೊಂಡಿದೆ. ಆದರೆ, ಮೃತದೇಹದ ಮರಣೋತ್ತರ ಪರೀಕ್ಷೆಗೆ ಮೃತನ ಸಹೋದರ ಸಹಿತ ಕುಟುಂಬಸ್ಥರು ಒಪ್ಪದ ಕಾರಣ ಸುಮಾರು ನಾಲ್ಕು ತಾಸು ಮೃತದೇಹದ ಪರೀಕ್ಷೆಗೆ ಕಳುಹಿಸಲು ವಿಳಂಬವಾಯಿತು.
ಪಂಚನಾಮೆಯ ವರದಿಯಲ್ಲಿ ಕೆಲವೊಂದು ಲೋಪವಿದ್ದ ಕಾರಣ ಕುಟುಂಬಸ್ಥರು ವರದಿಗೆ ಸಹಿ ಹಾಕಲು ಒಪ್ಪಿರಲಿಲ್ಲ. ವರದಿಯಲ್ಲಿದ್ದ ಲೋಪವನ್ನು ಸರಿಪಡಿಸಿದ ಬಳಿಕ ಕುಟುಂಬಸ್ಥರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿದರು.
ಸುಮಾರು 5.15 ಸುಮಾರಿಗೆ ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು. ಮೃತದೇಹವನ್ನು ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು.