ಮಂಗಳೂರು: “ಯಕ್ಷಗಾನ ಕಲಾ ಶಿಕ್ಷಣವು ಮಕ್ಕಳ ಬಾಳಿನಲ್ಲಿ ಶಿಸ್ತು, ದೈಹಿಕ ಕ್ಷಮತೆ, ಮಾನಸಿಕ ದೃಢತೆ, ಸಾಂಸ್ಕೃತಿಕ ಸಂಸ್ಕಾರ, ಭಾಷೆ, ಭಾಷಾಶುದ್ಧಿ ಇತ್ಯಾದಿಗಳನ್ನು ತರುತ್ತದೆ. ಅವರ ಶೈಕ್ಷಣಿಕ ಪ್ರಗತಿಗೂ ಅದು ಪೂರಕ.
ಕಲಿಯುವುದು, ಕಲಿಸುವುದು ಸುಲಭ. ಆದರೆ ತಿದ್ದುವುದು ಕಷ್ಟ. ಆದುದರಿಂದ ನಿಧಾನವಾದರೂ ಪರವಾಗಿಲ್ಲ, ತಪ್ಪಿಲ್ಲದೆ ಶುದ್ಧವಾಗಿ ಕಲಿಯುವುದು ಮುಖ್ಯ” ಎಂದು ಯಕ್ಷಗಾನ ಕಲಾವಿದ, ಸಂಘಟಕ, ಯಕ್ಷಗಾನ ಕಲಾರಂಗ (ರಿ ).ಉಡುಪಿ ಇದರ ಕಾರ್ಯದರ್ಶಿ ಶ್ರೀ ಮುರಲಿ ಕಡೇಕಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಕಡೇಕಾರ್ ಅವರು ಯಕ್ಷಾಭಿನಯ ಬಳಗ, ಮಂಗಳೂರು ನಡೆಸುವ ಬಡಗುತಿಟ್ಟು ಯಕ್ಷಗಾನ ತರಬೇತಿಯ ಈ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಾಭಿನಯ ಬಳಗವು ಕಳೆದ ಮೂರು ವರ್ಷಗಳಿಂದ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕಾಪಿಕಾಡು, ಬಿಜೈ ಇಲ್ಲಿ ಬಡಗುತಿಟ್ಟಿನ ಖ್ಯಾತ ಕಲಾವಿದ, ಗುರು, ಯಕ್ಷಶ್ರೀ ಐರೋಡಿ ಮಂಜುನಾಥ ಕುಲಾಲ್ ಅವರ ಸಮರ್ಥ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಯಕ್ಷ ಶಿಕ್ಷಣ ಮತ್ತು ಪ್ರದರ್ಶನವನ್ನು ನೀಡುತ್ತಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಾಗರತ್ನ, ಗುರು ಶ್ರೀ ಮಂಜುನಾಥ ಕುಲಾಲ್ ಅವರು ಮುಖ್ಯ ಅತಿಥಿಗಳಾಗಿದ್ದರು. ಬಳಗದ ಕಾರ್ಯದರ್ಶಿ ಶ್ರೀ ಸಂತೋಷ ಶೆಟ್ಟಿಯವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಅಧ್ಯಾಪಕ, ಕಲಾವಿದ ಶ್ರೀ ಮಂಜುನಾಥ ತೆಂಕಿಲ್ಲಾಯ ಅವರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಯಕ್ಷಾಭಿನಯ ಬಳಗದ ಅಧ್ಯಕ್ಷ ಶ್ರೀ ಪ್ರಶಾಂತ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಶ್ರೀ ರಾಮಕೃಷ್ಣ ಮರಾಠಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಯಕ್ಷ ಶಿಕ್ಷಣಾರ್ಥಿಗಳು, ಪಾಲಕರು, ಪೋಷಕರು ನೆರೆದಿದ್ದರು.
ಉದ್ಘಾಟನಾ ಸಮಾರಂಭದ ಅನಂತರ ತರಬೇತಿಯನ್ನು ಆರಂಭಿಸಲಾಯಿತು.