ಉಡುಪಿ: ಉಡುಪಿ ಶ್ರೀಕೃಷ್ಣ ಸನ್ನಿಧಾನ ಹಾಗೂ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ಸನ್ನಿಧಾನಗಳು ಪರಸ್ಪರ ಅಂತಃ ಸಂಬಂಧವುಳ್ಳ ಸನ್ನಿಧಾನಗಳಾಗಿದೆ. ಹಾಗಾಗಿ ಲಕ್ಷ್ಮೀದೇವಿ ಇಲ್ಲಿ ತನ್ನ ವೈಭವವನ್ನು ಮೆರೆದಿದ್ದಾಳೆ. ದೇಗುಲದ ಬ್ರಹ್ಮಕಲಶೋತ್ಸವವು ಡಾ| ಜಿ. ಶಂಕರ್ ಅವರಿಂದ ಆದರ್ಶಪ್ರಾಯವಾಗಿ ನಡೆದಿದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ಶನಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನದ ಬ್ರಹ್ಮಕಲಶೋತ್ಸವ ಪುಣ್ಯೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಮೊಗವೀರರದು ಸತ್ಯ ನಿಷ್ಟ ಸಮಾಜ. ಸಮುದ್ರದಲ್ಲಿ ಅತಂತ್ರವಾಗಿರುವ ದೋಣಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಅವರು ತಮ್ಮ ವೃತ್ತಿ ನಿರ್ವಹಿಸುತ್ತಾರೆ.
ಮೊಗವೀರ ಮಹಿಳೆಯರೂ ಇಂದು ಬಡತನದಿಂದ ಮುಕ್ತರಾಗಿದ್ದಾರೆ.
ಮಹಾಲಕ್ಷ್ಮಿಯ ವಿಶೇಷ ಅನುಗ್ರಹ ಅವರ ಮೇಲಾಗಲಿ ಎಂದು ಅವರು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಅನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಆಸ್ರಣ್ಣ ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮೀಯು ಎಲ್ಲರನ್ನೂ ಹರಸಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಜಿ. ಶಂಕರ್ ಮಾತನಾಡಿ, ಇಲ್ಲಿಯವರೆಗೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಅನ್ನ ದಾಸೋಹವು ನಡೆದಿದ್ದು, ಎ.15ರ ವರೆಗೆ ಸುಮಾರು 2.5 ಕೋಟಿ ಕುಂಕುಮಾರ್ಚನೆಗಳೂ ನೆರವೇರಲಿವೆ ಎಂದು ಹೇಳಿದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಮುಂಬಯಿ ಉದ್ಯಮಿಗಳಾದ ಕುಸುವೋದರ ಶೆಟ್ಟಿ, ಸುಧಾಕರ ಹೆಗ್ಡೆ, ಆನಂದ ಕುಂದರ್, ಭುವನೇಂದ್ರ ಕಿದಿಯೂರು, ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಗೌರಿ ಮರಾಠೆ, ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.
ಡಾ| ಜಿ. ಶಂಕರ್ ಸ್ವಾಗತಿಸಿದರು.
ದಾಮೋದರ ಶರ್ಮ ಬಾರ್ಕೂರು ನಿರ್ವಹಿಸಿದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶಂಕರ ಸಾಲ್ಯಾನ್ ವಂದಿಸಿದರು.