ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗಿರುವ ಕಾಂಗ್ರೆಸ್ ಎಂದೂ ದೇಶಕ್ಕೆ ಅಪಾಯಕಾರಿ: ಕುಯಿಲಾಡಿ

ಉಡುಪಿ: ಕೇವಲ ಒಂದೇ ವರ್ಗದ ಓಲೈಕೆ ರಾಜಕಾರಣ ಮಾಡುತ್ತಾ ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗಿರುವ ಕಾಂಗ್ರೆಸ್ ಎಂದೂ ದೇಶಕ್ಕೆ ಅಪಾಯಕಾರಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಎರಡೆರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್, ಅವರ ಸಾಧನೆ, ಘನತೆ, ಅರ್ಹತೆಗೆ ಭಾರತ ರತ್ನ ಗೌರವವನ್ನೂ ನೀಡದೆ. ಕನಿಷ್ಠ ಅವರ ಅಂತಿಮ ಸಂಸ್ಕಾರಕ್ಕೂ ದೆಹಲಿಯಲ್ಲಿ ಅವಕಾಶ ನೀಡದೇ ಅವಮಾನಿಸಿರುವುದು ಕರಾಳ ಇತಿಹಾಸವಾಗಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರ ಪ್ರಯತ್ನದಿಂದ ಪ್ರಧಾನಿ ವಿ.ಪಿ. ಸಿಂಗ್ ನೇತೃತ್ವದ ಕೇಂದ್ರ ಸರಕಾರ 1990ರಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಮರಣೋತ್ತರ ಭಾರತ ರತ್ನ ಗೌರವವನ್ನು ನೀಡಿದೆ.

ಪ್ರಸಕ್ತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನಕ್ಕೆ ಸಂಬಂಧಪಟ್ಟಿರುವ ಪ್ರಮುಖ ಸ್ಥಳಗಳನ್ನು ಪಂಚ ತೀರ್ಥ ಹೆಸರಿನಲ್ಲಿ ಅಭಿವೃದ್ಧಿಪಡಿಸಿ ಅವರಿಗೆ ಗೌರವವನ್ನು ಸಲ್ಲಿಸಿದೆ ಎಂದು ಕುಯಿಲಾಡಿ ತಿಳಿಸಿದ್ದಾರೆ.

ಮತಾಂಧ ದೇಶ ವಿರೋಧಿ ಸಂಘಟನೆಗಳು ಸೃಷ್ಠಿಸಿದ ಹಿಜಾಬ್ ವಿವಾದದ ಕುರಿತು ನಿಷೇಧಿತ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನೊಬ್ಬ ನೀಡಿದ ಹೇಳಿಕೆಗೆ ಹಿಂದೂ ವಿರೋಧಿ ಮಾನಸಿಕತೆಯ ಮಾಜಿ ಸಿ.ಎಂ. ಸಿದ್ಧರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸಿ, ಪರೋಕ್ಷ ಬೆಂಬಲ ನೀಡಿರುವುದು ಖಂಡನೀಯ. ಕಾಂಗ್ರೆಸ್ ಇಂತಹ ವಿವಾದಗಳಿಗೆ ಬೆಂಬಲಿಸುತ್ತಾ ಬಂದಿರುವುದು ಜಗಜ್ಜಾಹೀರಾಗಿದೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸದಸ್ಯತಾ ನೊಂದಣಿ ಅಭಿಯಾನವು ಸಂಪೂರ್ಣ ವೈಫಲ್ಯವನ್ನು ಕಂಡಿದ್ದು, ಬಿಜೆಪಿ ಸದಸ್ಯತ್ವ ಹೊಂದಿರುವ ಅಮಾಯಕ ಜನತೆಯನ್ನು ಯೋಜನೆಗಳ ಹೆಸರಿನಲ್ಲಿ ಯಾಮಾರಿಸಿ, ಮೋಸದಿಂದ ಕಾಂಗ್ರೆಸ್ ಸದಸ್ಯರನ್ನಾಗಿ ನೊಂದಣಿ ಮಾಡಿರುವ ಹಲವಾರು ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ತನ್ನ ಪಕ್ಷದ ನಾಯಕರಿಗೆ 150 ಸ್ಥಾನಗಳ ಟಾರ್ಗೆಟ್ ನೀಡಿರುವುದು ಹಾಸ್ಯಾಸ್ಪದವೆನಿಸಿದೆ ಎಂದು ಕುಯಿಲಾಡಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಾತಿನಂತೆ ಬಿಜೆಪಿ ರಾಷ್ಟ್ರ ಭಕ್ತಿಯಲ್ಲಿ ಮೇಳೈಸಿದರೆ, ವಿರೋಧ ಪಕ್ಷಗಳು ಪರಿವಾರ ಭಕ್ತಿಗೆ ಜೋತು ಬಿದ್ದಿವೆ. ದೇಶದ ಅಖಂಡತೆ, ಭದ್ರತೆ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ಇದಕ್ಕೆ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯ ಫಲಿತಾಂಶವೇ ಸಾಕ್ಷಿ.

ಕೋವಿಡ್ ಸಂಕಷ್ಟದ ಸಮಯದಿಂದ ಕೇಂದ್ರ ಸರಕಾರ ಬಡ ಜನತೆಯ ಹಸಿವು ನೀಗಿಸಲು ಪ್ರಧಾನ ಮಂತ್ರಿ ಆಹಾರ ಭದ್ರತೆಯ ಗರೀಬ್ ಕಲ್ಯಾಣ ಯೋಜನೆಯಡಿ ದೇಶದ 80 ಕೋಟಿ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿರುವ ಅನ್ನ ಯೋಜನೆ ಆಹಾರ ವಿತರಣೆ ಸೌಲಭ್ಯವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐ.ಎಂ.ಎಫ್ ಪ್ರಶಂಸೆಗೆ ಪಾತ್ರವಾಗಿದೆ.

ಎ.6ರಂದು ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಪಕ್ಷದ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಬಿಜೆಪಿ ಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಎ.14ರಂದು ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸೇವಾ ಕಾರ್ಯಗಳ ಮೂಲಕ ಆಚರಿಸಲಾಗುವುದು. ಪಕ್ಷದ ವಿಸ್ತಾರಕ ಯೋಜನೆಯಡಿ ಬೂತ್ ಮಟ್ಟದಿಂದ ಸದೃಢ ಪಕ್ಷ ಸಂಘಟನೆ ಕಾರ್ಯದಲ್ಲಿ ಪಕ್ಷದ ಸಮಸ್ತ ಕಾರ್ಯಕರ್ತರು ತೊಡಗಿಸಿಕೊಂಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮಗದೊಮ್ಮೆ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.