ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಅಧ್ಯಯನಕ್ಕೆ ಚಿಂತನೆ; ಪ್ರಧಾನಿ ಮೋದಿ

ನವದೆಹಲಿ: ವಿಶ್ವದಾದ್ಯಂತ ಏ.7ರ ದಿನವನ್ನು ಆರೋಗ್ಯ ದಿನವನ್ನಾಗಿ ಆಚರಿಸುವ ಪ್ರಯುಕ್ತ, ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯಕೀಯ ಕ್ಷೇತ್ರದಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಶುಭ ಹಾರೈಸಿದರು. ಹಾಗೆಯೇ ಈ ಬಾರಿ ದೇಶದಲ್ಲಿ `ನಮ್ಮ ಆರೋಗ್ಯ ನಮ್ಮ ಗ್ರಹ’ ಘೋಷವಾಕ್ಯದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಕಳೆದ 8 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಯಾಗಿದ್ದು, ಹಲವಾರು ಹೊಸ ವೈದ್ಯಕೀಯ ಕಾಲೇಜುಗಳು ತಲೆಎತ್ತಿದೆ. ಸ್ಥಳೀಯ ಭಾಷೆಗಳಲ್ಲೇ ವೈದ್ಯಕೀಯ ಅಧ್ಯಯನವನ್ನು ಸಕ್ರಿಯಗೊಳಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಅಸಂಖ್ಯಾತ ಯುವ ಸಮೂಹದ ಆಕಾಂಕ್ಷಿಗಳಿಗೆ ತಳಹದಿ ಹಾಕಿಕೊಡಲಿದೆ ಎಂದು ಆಶ್ವಾಸನೆ ನೀಡಿದರು.

ನಮ್ಮ ರಾಷ್ಟ್ರವು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣೆ ಯೋಜನೆಯಾದ ಆಯುಷ್ಮಾನ್ ಭಾರತ್‌ಗೆ ನೆಲೆಯಾಗಿದ್ದು, ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತರುವ ವಿಷಯವಾಗಿದೆ. ಪ್ರಧಾನಮಂತ್ರಿ ಜನ್ ಧನ್ ಔಷಧಿಯಂತಹ ಯೋಜನೆಗಳ ಫಲಾನುಭವಿಗಳೊಂದಿಗೆ ನಾನು ಸಂವಾದ ನಡೆಸಿದಾಗ, ಅವರಿಂದ ಬಂದ ಅಭಿಪ್ರಾಯಗಳಿಂದ ನನಗೂ ಸಂತೋಷವಾಗಿದೆ. ಕೈಗೆಟುಕುವ ದರದಲ್ಲಿ ಆರೋಗ್ಯ ಸೌಕರ್ಯಗಳನ್ನು ಕಲ್ಪಿಸುತ್ತಾ ಬಡ ಮತ್ತು ಮಧ್ಯಮ ವರ್ಗದವರಿಗೆ ಗಮನಾರ್ಹ ಉಳಿತಾಯವನ್ನೂ ಖಾತ್ರಿಪಡಿಸಿದೆ. ಇದೇ ಸಮಯದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸಲು ಆಯುಷ್ಮಾನ್ ಆರೋಗ್ಯ ಕಾರ್ಡ್ ಅನ್ನು ಬಲಪಡಿಸಲು ಮುಂದಾಗುತ್ತಿದ್ದೇವೆ ಎಂದು ಹೇಳಿದರು.