ಉಡುಪಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ವಿಷ್ಣುಮೂರ್ತಿನಗರ ಕೆಳಾರ್ಕಳಬೆಟ್ಟು ಇದರ ಶ್ರೀ ದೇವರ ನೂತನ ರಜತ ಬಿಂಬ ಪ್ರತಿಷ್ಠೆ ಪ್ರಯುಕ್ತ ಬ್ರಹ್ಮಕಲಶೋತ್ಸವ ಮತ್ತು ಹನುಮ ಜಯಂತಿ ಉತ್ಸವ ಏಪ್ರಿಲ್ 13 ರಿಂದ 16 ರವರಗೆ ನಡೆಯಲಿದೆ ಎಂದು ಶಾಲೆಯ ಅಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಬೆಳ್ಕಲೆ ಹೇಳಿದರು.
ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 14 ರಂದು ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ವೀರ ಮಾರುತಿ ದೇವರ ಪುನಃ ಪ್ರತಿಷ್ಠೆ ನಡೆಯಲಿದೆ. ಏಪ್ರಿಲ್ 16 ರಂದು ಬ್ರಹ್ಮಕಲಶ ಹಾಗೂ ವಾಯುಸ್ತುತಿ ಪುನಃಶ್ಚರಣ ಹೋಮ ಜರುಗಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಪಲ್ಲಪೂಜೆ ಮತ್ತು 12.30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಏಪ್ರಿಲ್ 13ರಂದು ಮಧ್ಯಾಹ್ನ 2.30 ಕ್ಕೆ ಹೊರೆ ಕಾಣಿಕೆ ಹಾಗೂ ದೇವರ ರಜತ ಬಿಂಬವನ್ನು ತೀರ್ಥಪ್ರಸಾದದೊಂದಿಗೆ ಪೂರ್ಣಕುಂಭ ಕಳಸ ವಿವಿಧ ಬಿರುದಾವಳಿ ವಿನೋದಾವಳಿಗಳೊಂದಿಗೆ ಕೆಳಾರ್ಕಳಬೆಟ್ಟು ಶ್ರೀ ದೇವೆ ಭೂದೇವಿ ಸಹಿತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಶೋಭಾ ಯಾತ್ರೆಯ ಮೂಲಕ ಸನ್ನಿಧಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮ ಜರುಗಲಿದೆ. ಏಪ್ರಿಲ್ 14 ರಂದು ಸಂಜೆ 6.30 ಕ್ಕೆ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವೀರಮಾರುತಿ ವ್ಯಾಯಾಮ ಶಾಲೆಯ ಇದರ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಲೆ ವಹಿಸಲಿದ್ದಾರೆ.
ಏಪ್ರಿಲ್ 16ರಂದು ಸಂಜೆ 5.30 ಕ್ಕೆ ಸಭಾಕಾರ್ಯಕ್ರಮ ಜರುಗಲಿದ್ದು ಕಾಣಿಯೂರು ಮಠದ ಶ್ರೀ ವಿದ್ಯಾವ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅಂದು ರಾತ್ರಿ 8.30ಕ್ಕೆ ವಿದ್ಯಾರ್ಶ್ರೀ ಕಲಾವಿದೆರೆ, ಕೈಕಂಬ- ಕುಡ್ಲ ಇವರಿಂದ ದೈವರಾಜೆ ಶ್ರೀ ಬಬ್ಬುಸ್ವಾಮಿ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವ್ಯಾಯಾಮ ಶಾಲೆಯ ಚೇತನ್ ರಾವ್, ಸುರೇಶ್ ಕುಮಾರ್, ಅಶೋಕ್ ಕೋಟೆ, ಪ್ರದೀಪ್ ಅಂಚನ್, ಸುಮಿತ್ ಪಾಲನ್, ರೋಶನ್ ಕುಮಾರ್ ಉಪಸ್ಥಿತರಿದ್ದರು.