ಸಾರ್ವಜನಿಕರ ಬಾಯಾರಿಕೆ ತಣಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ನಗರದ ಮಾರುಥಿ ವೀಥಿಕಾದ ಕಚೇರಿಯ ಬಳಿ ಸ್ಥಾಪಿಸಿರುವ ಜಲ ಕುಟೀರವನ್ನು ಉಡುಪಿ ತಹಶೀಲ್ದಾರ್ ಅರ್ಚನಾ ಭಟ್ ಅವರು ಸೋಮವಾರ ಉದ್ಘಾಟಿಸಿದರು. ನಾಗರಿಕ ಸಮಿತಿಯ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಮಾತನಾಡಿ, ನಗರದಲ್ಲಿ ಬಿಸಿಲ ತಾಪ ಏರಿಕೆ ಕಂಡಿದ್ದು, ಸಾರ್ವಜನಿಕರು ತಲೆ ಸುತ್ತು ಬಂದು ಅಸ್ವಸ್ಥರಾದ ಘಟನೆಗಳು ಕಂಡು ಬಂದಿದೆ. ಹೀಗಾಗಿ ನಾವು ಜೋಸ್ ಆಲುಕ್ಕಾಸ್ ಮಳಿಗೆಯವರ ಸಹಕಾರದಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜೋಸ್ ಆಲುಕ್ಕಾಸ್ ಆಭರಣ ಮಳಿಗೆಯ ಶಾಖಾ ವ್ಯವಸ್ಥಾಪಕ ರಾಜೇಶ್ ಎನ್.ಆರ್, ಕೋಟಕ್ ಮಹೇಂದ್ರ ಬ್ಯಾಂಕಿನ ಶಾಖಾ ಪ್ರಬಂಧಕ ಶ್ರೀನಿಧಿ, ನಾಗರಿಕ ಸಮಿತಿಯ ಕೆ.ಬಾಲಗಂಗಾಧರ ರಾವ್, ಮೈತ್ರಿ ಮಹಮ್ಮದ್, ಪ್ರಸಾದ್ ಶೆಟ್ಟಿ, ತಾರಾನಾಥ್ ಮೇಸ್ತ ಶಿರೂರು ಹಾಗೂ ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.