ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ- ಗ್ರಾಮ ಭಜನೆ’ ಉದ್ಘಾಟನೆ

ಉಡುಪಿ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ- ಗ್ರಾಮ ಭಜನೆ’ಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಶನಿವಾರ  ಉದ್ಘಾಟಿಸಿದರು.

ದೇವಸ್ಥಾನವೊಂದು ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುವಾಗ ಜಾತಿಮತ ಭೇದವಿಲ್ಲದೆ ಆ ಗ್ರಾಮದ ಎಲ್ಲಾ ಭಕ್ತರ ಮನೆಗಳಲ್ಲಿ ಭಜನೆ ಮಾಡುವುದು ವಿಶಿಷ್ಟ ಕಲ್ಪನೆಯ ಕ್ರಾಂತಿಯಾಗಿದೆ. ನಾವು ಬೇರೆ ಬೇರೆ ರೀತಿಯ ಭಜನೆಗಳನ್ನು ಕಂಡಿದ್ದೇವೆ. ಇದು ಮಾತ್ರ ವಿಶಿಷ್ಟವಾದುದು. ಇದರಿಂದ  ದೇವಸ್ಥಾನದ ಜತೆ ಮನೆಗಳಲ್ಲಿಯೂ ಸಾನಿಧ್ಯ ವೃದ್ಧಿ ಯಾಗುತ್ತದೆ ಎಂದು ಶ್ರೀಪಾದರು ಹೇಳಿದರು.

ದೇವಸ್ಥಾನದ ಸ್ಟಿಕ್ಕರ್ ಬಿಡುಗಡೆಗೊಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಈ ವಿನೂತನ ಕಲ್ಪನೆಯನ್ನು ಬೇರೆ ದೇವಸ್ಥಾನಗಳಲ್ಲಿಯೂ ಅಳವಡಿಸಿಕೊಳ್ಳಬಹುದು.

ದೇವಸ್ಥಾನದಲ್ಲಿ ಹಬ್ಬದ ವಾತಾವರಣವಿರುವಂತೆ ಭಕ್ತರ ಮನೆಗಳಲ್ಲಿಯೂ ಹಬ್ಬದ ವಾತಾವರಣ ಮೂಡಲು ಮನೆ ಮನೆ ಭಜನೆ ಸಹಕಾರಿಯಾಗುತ್ತದೆ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ನಾಗೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಾದ ರಾಕೇಶ್ ಜೋಗಿ ಸ್ವಾಗತಿಸಿ ಸಂದೀಪ್ ಸನಿಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

ಶಾಸಕ ಕೆ. ರಘುಪತಿ ಭಟ್, ವ್ಯವಸ್ಥಾಪನ ಮಂಡಳಿ ಸದಸ್ಯ ಕೆ. ನಾಗರಾಜ ಶೆಟ್ಟಿ, ಗ್ರಾಮ ಭಜನೆ ಸಂಚಾಲಕ ಜೀವರತ್ನ ದೇವಾಡಿಗ, ಅರ್ಚಕ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ ಉಪಸ್ಥಿತರಿದ್ದರು.

ಭಜನಾ ತಂಡದ ನಾಯಕಿಯರಾದ ಶ್ರೀಮತಿ ಗೀತಾ ನಾಯಕ್, ಶ್ರೀಮತಿ ಸುಮಲತಾ ಉದಯ್, ಶ್ರೀಮತಿ ಅಶ್ವಿನಿ ಪೈ, ಶ್ರೀಮತಿ ಶಕುಂತಲಾ ಶೆಟ್ಟಿ, ಇವರನ್ನು ಗೌರವಿಸಲಾಯಿತು.

ಸ್ವರ್ಣ ಕಲಶಕ್ಕೆ 60 ಗ್ರಾಂ ಚಿನ್ನ ಸಮರ್ಪಣೆ:

ಅರ್ಚಕ ದುರ್ಗಾಪ್ರಸಾದ್ ಉಪಾಧ್ಯಾಯ ಮತ್ತು ಶಾಂತಿ ಸುಧೀಂದ್ರ ತುಮಕೂರು ಅವರು ಸುಬ್ರಹ್ಮಣ್ಯ ದೇವರ ಗುಡಿಗೆ ಸ್ವರ್ಣಕಲಶದ ಬಾಬ್ತು 60 ಗ್ರಾಂ ಚಿನ್ನವನ್ನು ತನ್ನ ತೀರ್ಥರೂಪ ಶ್ರೀಪತಿ ಉಪಾಧ್ಯ ಮತ್ತು ಜಯಂತಿ ಅವರ ಸ್ಮರಣಾರ್ಥ ಸಮರ್ಪಿಸಿದರು.

ನಿತ್ಯ 60 ಮನೆಗಳಲ್ಲಿ ಭಜನೆ:

ಮೊದಲ ದಿನ ಸುಮಾರು 65 ಮನೆಗಳಲ್ಲಿ ಭಜನೆ ನಡೆಯಿತು. ಪ್ರತಿ ಭಜನೆ ತಂಡದಲ್ಲಿ ತಲಾ 30 ರಿಂದ 40ರ ತನಕ ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ವಿಶೇಷ ಆಸಕ್ತಿಯಿಂದ ಪಾಲ್ಗೊಂಡರು. ಇಂತಹ ಐದು ತಂಡ ನಿತ್ಯ 60 ಮನೆಗಳನ್ನು ಭಜನೆ ಮೂಲಕ ಸಂಪರ್ಕಿಸಲಿದೆ. ಒಂದು ತಿಂಗಳ ಕಾಲ ಇದು ನಡೆಯಲಿದೆ. ಪ್ರತಿಯೊಂದು ಮನೆಯಲ್ಲಿ ದೀಪ ಹಚ್ಚಿ, ರಂಗವಲ್ಲಿ ಬಿಡಿಸಿ ಊದು ಬತ್ತಿ ಹಚ್ಚಿ ಹೃದಯಾಂತರಾಳದಿಂದ ಸ್ವಾಗತಿಸಲಾಯಿತು. ಕೆಲವು ಮನೆಯಲ್ಲಿ ಹಣ್ಣು- ಹಂಪಲುಗಳೊಂದಿಗೆ ಪಾನಕದ ವ್ಯವಸ್ಥೆ ಮಾಡಿದ್ದರು. ಭಜನೆ ತಂಡದವರು ಮನೆ ಮನೆಗೆ ಶ್ರೀ ದೇವರ ಕುಂಕುಮ ಪ್ರಸಾದ ಪಂಚಕಜ್ಜಾಯ ಕಟ್ಟು, ಭಜನಾ ಪುಸ್ತಕವನ್ನು ಮತ್ತು ಬ್ರಹ್ಮಕಲಶೋತ್ಸವದ ಸ್ಟಿಕ್ಕರ್ ನೀಡುವರು.