ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ ಹಾಗೂ ಚತುಃಪವಿತ್ರ ನಾಗಬ್ರಹ್ಮಮಂಡಲೋತ್ಸವಕ್ಕೆ ಸಮಸ್ತ ಮೊಗವೀರ ಕುಲಭಾಂದವರಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ಸಮರ್ಪಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಆಗಮಿಸಿದ ದಕ್ಷಿಣ ವಿಭಾಗದ ಹೊರೆಕಾಣಿಕೆ ಮೆರವಣಿಗೆಯನ್ನು ಎರ್ಮಾಳ್ ನಲ್ಲಿ, ಉತ್ತರದ ಶಿರೂರು ಗಡಿಭಾಗದಿಂದ ಮೊದಲ್ಗೊಂಡು ಆಗಮಿಸಿದ ಉಡುಪಿ ಜಿಲ್ಲೆಯ ಹೊರೆ ಕಾಣಿಕೆ ಮೆರವಣಿಗೆಗೆ ಮುಳೂರಿನಲ್ಲಿ ಚಾಲನೆ ನೀಡಲಾಗಿದೆ.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್ ಸಹಿತ ದ.ಕ. ಮೊಗವೀರ ಮಹಾಜನ ಸಂಘ, ಜೀರ್ಣೋದ್ಧಾರ ಸಮಿತಿ, ಕ್ಷೇತ್ರಾಡಳಿತ ಸಮಿತಿ, ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಮೆರವಣಿಗೆಯ ಉಸ್ತುವಾರಿಗಳಾದ ಹರಿಯಪ್ಪ ಕೋಟ್ಯಾನ್, ಯಶ್ ಪಾಲ್ ಸುವರ್ಣ, ಕಿಶೋರ್ ಡಿ. ಸುವರ್ಣ, ಲಕ್ಷ್ಮಣ್ ಮೈಂದನ್, ರಮೇಶ್ ಕೋಟ್ಯಾನ್, ಸತೀಶ್ ಕುಂದರ್, ರತ್ನಾಕರ ಸಾಲ್ಯಾನ್, ರಾಮಚಂದ್ರ ಕುಂದರ್, ಶಿವರಾಮ ಕೆ.ಎಂ. ಸಹಿತ ಪ್ರಮುಖರ ನೇತೃತ್ವದಲ್ಲಿ ಹೊರೆ ಕಾಣಿಕೆ ಮೆರವಣಿಗೆಯು ವಿಜ್ರಂಭಣೆಯಿಂದ ನಡೆಯಿತು.
15,000 ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗಿ:
ಹೊರೆಕಾಣಿಕೆ ಮೆರವಣಿಗೆಯಲ್ಲಿ ಅಕ್ಕಿ ಮುಡಿ ಹೊತ್ತ ಮಹಿಳೆಯರು, ನಾಡಡೋಲು, ಬಿರುದಾವಳಿ, ಘಟೋದ್ಕಚ, ಸ್ವರ್ಣ ಕಲಶ, ಶಂಖ ನಾದ ಜಾಗಟೆ, ನಾಗಸ್ವರ, ಪೂರ್ಣಕುಂಭ, ಕೊಂಬು ಕಹಳೆ, ತಟ್ಟೀರಾಯ, ಮುಖವಾಡ, ಬ್ಯಾಂಡ್ ಸೆಟ್, ಕೀಲು ಕುದುರೆ, ಸ್ತಬ್ಧ ಚಿತ್ರ, ಕುಣಿತ ಚೆಂಡೆ, ಚೆಂಡೆ, ನಾಸಿಕ್ ಬ್ಯಾಂಡ್, ಪೇಟಧಾರಿ ಮಹಿಳೆಯರು ಮತ್ತು ಪುರುಷರು, ಹುಲಿ ವೇಷ, ಮರದ ಕಾಲು, ತಾಲೀಮು, ನಾಡದೋಣಿ, ಯಾಂತ್ರೀಕೃತ ದೋಣಿ, ಮಟ್ಟುಗುಳ್ಳ ಸಹಿತವಾಗಿ ಸಾವಿರಾರು ವಾಹನಗಳೊಂದಿಗೆ ಹದಿನೈದು ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು.