ಬೈಲೂರು: ಭೀತಿ ಹುಟ್ಟಿಸಿದ ಕಾಡುಕೋಣದ ರಕ್ಷಣೆ; ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!!

ನಿರೇ ಬೈಲೂರು ಗ್ರಾಮದ ಜಡ್ಡಿನಂಗಡಿ ಎಂಬಲ್ಲಿ ಮಂಗಳವಾರ ಭೀತಿ ಹುಟ್ಟಿಸಿದ್ದ ಕಾಡುಕೋಣವೊಂದನ್ನು ಅರಣ್ಯ ಇಲಾಖೆಯವರು ಅರವಳಿಕೆ ಮದ್ದು ನೀಡಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಕಾಡುಕೋಣವನ್ನು ರಕ್ಷಣೆ ಮಾಡಿದರು. ಮೊದಲು ಕಾಡುಕೋಣನಿಗೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಲಾಯಿತು. ಬಳಿಕ ಕ್ರೈನ್ ಮೂಲಕ ಕಾಡುಕೋಣವನ್ನು ಟಿಪ್ಪರ್ ನಲ್ಲಿ ಹಾಕಿ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.

ಜಡ್ಡಿನಂಗಡಿಯ ಮನೆಯೊಂದರ ಅಂಗಳಕ್ಕೆ ಮಂಗಳವಾರ ಮಧ್ಯಾಹ್ನ ಕಾಡುಕೋಣವೊಂದು ಏಕಾಏಕಿಯಾಗಿ ನುಗ್ಗಿದ್ದು, ಇದರಿಂದ ಈ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.

ಗ್ರಾಮಸ್ಥರು ಕಾಡುಕೋಣವನ್ನು ಕಾಡಿಗಟ್ಟಲು ಶತಪ್ರಯತ್ನ ನಡೆಸಿದರೂ ಕೋಣ ಮಾತ್ರ ಗ್ರಾಮ ಬಿಟ್ಟು ತೆರಳಿಲಿಲ್ಲ‌.

ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಕಾಡುಕೋಣವನ್ನು ಸೆರೆ ಹಿಡಿದರು. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.