ಪರ್ಕಳ: ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದ ಮರಳು ತುಂಬಿದ ಲಾರಿ; ಚಾಲಕ, ಕ್ಲೀನರ್ ಪಾರು

ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿ ಮರಳು ಸಾಗಾಟದ ಲಾರಿಯೊಂದು ರಸ್ತೆಯ ಬದಿಯ ತಗ್ಗು ಪ್ರದೇಶಕ್ಕೆ ಉರುಳಿಬಿದ್ದ ಘಟನೆ ಉಡುಪಿಯ ಪರ್ಕಳ ಪೇಟೆ ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಮರಳು ತುಂಬಿಕೊಂಡು ಮಣಿಪಾಲದಿಂದ ಪರ್ಕಳ ಕಡೆಗೆ ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪರ್ಕಳ ಪೇಟೆಗೆ ಸಮೀಪಿಸುತ್ತಿದ್ದಂತೆ ಹೆದ್ದಾರಿ ಕಾಮಗಾರಿಯ ಪರಿಣಾಮ ಮುಂದಕ್ಕೆ ಚಲಿಸಲಾಗದೆ ಹಿಮ್ಮುಖವಾಗಿ ಚಲಿಸಿದ ಲಾರಿ ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದಿದೆ.

ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಾರಿ ಹಿಮ್ಮುಖವಾಗಿ‌ ಚಲಿಸಿ ಮನೆಯೊಂದರ ಮೇಲೆ ಬಿದ್ದಿದೆ. ಈಗಾಗಲೇ ಮನೆಯಲ್ಲಿದ್ದವರು ಮನೆ ಖಾಲಿ ಮಾಡಿದ ಪರಿಣಾಮ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಸದ್ಯ ಈ ಭಾಗದಲ್ಲಿ ನಡೆಯುತ್ತಿರುವ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇರುವುದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಮಳೆಗಾಲ ಬರುವ ಮುಂಚೆ ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.