ಉಡುಪಿ: ಸ್ಕೂಟರ್ ಗೆ ಕಾರು ಡಿಕ್ಕಿ; ಮೆಡಿಕಲ್ ಶಾಪ್ ಮಾಲೀಕ ಮೃತ್ಯು

ಉಡುಪಿ: ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಉಡುಪಿ ಕಡಿಯಾಳಿಯ ಸಮೀಪ ಇಂದು ಬೆಳಿಗ್ಗೆ ನಡೆದಿದೆ.

ಮೃತರನ್ನು ಪರ್ಕಳದ ಮೆಡಿಕಲ್ ಶಾಪ್ ನ ಮಾಲೀಕ ವಾಮನ ನಾಯಕ್ ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಿಗ್ಗೆ ಮಗಳನ್ನು ಉಡುಪಿಯ ಶಾಲೆಗೆ ಬಿಟ್ಟು, ಕಡಿಯಾಳಿ ಬಳಿ ಬರುವಾಗ ಕಾರೊಂದು ರಭಸವಾಗಿ ಬಂದು ಸ್ಕೂಟರ್ ಗೆ ಡಿಕ್ಕಿ‌ ಹೊಡೆದಿದೆ. ಇದರ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಉರುಳಿಬಿದ್ದ ವಾಮನ್ ನಾಯಕ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಅಜ್ಜರಕಾಡು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ವಾಮನ್ ಅವರು ಉತ್ತಮ ಭಜನೆ ಹಾಡುಗಾರರಾಗಿದ್ದು, ಸಂಗೀತದ ಪರಿಕರಗಳನ್ನು ನುಡಿಸುತ್ತಿದ್ದರು. ತನ್ನ ಹಾಡುಗಾರಿಕೆಯ ಮೂಲಕ ಜನಮನ್ನಣೆ ಗಳಿಸಿದ್ದರು.

ಪರ್ಕಳದ ಮೋಹನ್ ದಾಸ್ ನಾಯಕ್, ಗಣೇಶ್ ರಾಜ್ ಸರಳೇಬೆಟ್ಟು ಅವರು ಸಹಿತ ಹಲವಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.