ಉಡುಪಿ: ಮಾ.27 ಕ್ಕೆ ‘ವಿಶ್ವ ರಂಗಭೂಮಿ ದಿನಾಚರಣೆ- 2022’ ಕಾರ್ಯಕ್ರಮ

ಉಡುಪಿ: ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗಭೂಮಿ ಉಡುಪಿ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ವಿಶ್ವ ರಂಗಭೂಮಿ ದಿನಾಚರಣೆ- 2022’ ಕಾರ್ಯಕ್ರಮ ಇದೇ ಮಾ.27ರಂದು ಸಂಜೆ 6 ಗಂಟೆಗೆ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು‌. ಅಂಬಲಪಾಡಿ ಜರ್ನಾದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಪೆರ್ಣಂಕಿಲ ಶ್ರೀಶ ನಾಯಕ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಂ.ಕೆ. ಮಠ ಉಪ್ಪಿನಂಗಡಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ರಂಗಭೂಮಿ ಉಪಾಧ್ಯಕ್ಷ ಎಂ. ನಂದಕುಮಾರ್ ಅವರಿಗೆ ವಿಶ್ವರಂಗಭೂಮಿ ದಿನಾಚರಣೆ ಗೌರವ ನೀಡಿ ಸನ್ಮಾನಿಸಲಾಗುವುದು. ಸಭಾಕಾರ್ಯಕ್ರಮದ ಬಳಿಕ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ‘ಉಡಿಯೊಳಗಣ ಕಿಚ್ಚು’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು, ಜೊತೆ ಕಾರ್ಯದರ್ಶಿ ಶ್ರೀಪಾದರ ಹೆಗಡೆ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಪೂರ್ಣಿಮಾ ಸುರೇಶ್, ಆನಂದ ಮೇಲಂಟಿ ಉಪಸ್ಥಿತರಿದ್ದರು