ಉಡುಪಿ: ಏಪ್ರಿಲ್ ೧೮ ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು, ಮತದಾನವು ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲು ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮತದಾನ ಕರ್ತವ್ಯಕ್ಕಾಗಿ 206 ಮೈಕ್ರೋ ಅಬ್ಸರ್ವರ್ ಸೇರಿದಂತೆ 6,489 ಸಿಬ್ಬಂದಿ ನೇಮಿಸಿದ್ದು, ಮತದಾರರಿಗೆ ಶೇ.99.5 ಮತದಾರರ ವಿವರವಿರುವ ವೋಟರ್ ಸ್ಲಿಪ್ ಗಳನ್ನು ವಿತರಿಸಲಾಗಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗಾಗಿ ಜಿಪಿಎಸ್ ಅಳವಡಿಸಿರುವ ೨೪೪ ವಾಹನಗಳನ್ನು ವ್ಯವಸ್ಥೆ ಮಾಡಿದೆ. ಮತಯಂತ್ರಗಳನ್ನು ವಿಧಾನಸಭಾ ಕ್ಷೆತ್ರದ ಭದ್ರತಾ ಕೊಠಡಿಯಿಂದ, ಮತ ಎಣಿಕಾ ಕೇಂದ್ರವಾದ ಸೈಂಟ್ ಸಿಸಿಲಿಸ್ ಶಿಕ್ಷಣ ಸಂಸ್ಥೆಯ ಮತ ಎಣಿಕಾ ಕೇಂದ್ರಕ್ಕೆ ತರುವ ಕಂಟೈನರ್ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಸೂಕ್ತ ಭದ್ರತಾ ಬೆಂಗಾವಲಿನಲ್ಲಿ ಭದ್ರತಾ ಕೊಠಡಿಗೆ ತರಲಾಗುವುದು ಎಂದು ಡಿಸಿ ಹೇಳಿದರು.
ಮತದಾನಕ್ಕಾಗಿ ಜಿಲ್ಲೆಗೆ ಒದಗಿಸಲಾಗಿರುವ ಎಲ್ಲಾ ಎವಿಎಂ ಮತ್ತು ವಿವಿ ಪ್ಯಾಟ್ ಗಳನ್ನು ಪರೀಕ್ಷಿಸಲಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾಹಿತಿ ನೀಡಿ, ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಪತ್ರಗಳ ಜೋಡಣೆ ಕಾರ್ಯ ನಡೆಸಲಾಗಿದೆ. ೧೩೭೯ ಬ್ಯಾಲೆಟ್ ಯೂನಿಟ್, ೧೨೮೦ ಕಂಟ್ರೋಲ್ ಯೂನಿಟ್ ಮತ್ತು ೧೪೭೭ ವಿವಿ ಪ್ಯಾಟ್ ಗಳನ್ನು ಉಪಯೋಗಿಸಲಾಗುತ್ತಿದೆ, ಮತಯಂತ್ರಗಳ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೆತ್ರಕ್ಕೆ ೨ ಬಿ.ಇ.ಎಲ್ ಇಂಜಿನಿಯರ್ ಗಳನ್ನು ನಿಯೋಜಿಸಲಾಗಿದೆ ಎಂದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಪ್ತಿಯ ೫೪ ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದ್ದು, ೧೫ ಮತಗಟ್ಟೆಗಳಿಗೆ ವೀಡಿಯೋ ಗ್ರಾಫರ್, ೨೧ ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿ ನೇಮಿಸಲಾಗಿದೆ.
ಜಿಲ್ಲೆಯಲ್ಲಿ ೨೫ ಸಖೀ ಮತಗಟ್ಟೆ , ೨ ವಿಶೇಷಚೇತನ ಮತಗಟ್ಟೆ, ೧ ಎಥ್ನಿಕ್ ಬೂತ್ ತೆರೆಯಲಾಗುವುದು, ವಿಶೇಷಚೇತನ ಮತದಾರರಿಗೆ ಗಾಲಿಕುರ್ಚಿ, ಬೂತ ಕನ್ನಡಿ, ಬ್ರೈಲ್ ಮಾದರಿ ಮತಪತ್ರ, ಆದ್ಯತೆ ಮೇಲೆ ಪ್ರವೇಶ, ರ್ಯಾಂಪ್ ಮತ್ತು ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಒದಗಿಸಲಾಗುವುದು ಎಂದರು.
ಮತದಾನದ ದಿನ ಯಾವುದೇ ಅಕ್ರಮ ಕಂಡುಬಂದಲ್ಲಿ ಸೀವಜಿಲ್ ಮೂಲಕ ಅಥವಾ ಸಹಾಯವಾಣಿ ಸಂಖ್ಯೆ ೧೯೫೦ ಗೆ ದೂರು ನೀಡುವಂತೆ ಡಿಸಿ ತಿಳಿಸಿದರು.
ಎಸ್ಪಿ ನಿಶಾ ಜೇಮ್ಸ್ ಮಾತನಾಡಿ, ಜಿಲ್ಲೆಯ ೮೬೫ ಮತಗಟ್ಟೆಗಳಲ್ಲಿ ೧೮೦ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ೬೮೫ ಸಾಮಾನ್ಯ ಮತಗಟ್ಟೆಗಳಾಗಿವೆ, ೩೬ ನಕ್ಸಲ್ ಪೀಡಿತ ಮತಗಟ್ಟೆಗಳಿದ್ದು, ಈ ಪ್ರದೇಶದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.