ಉಡುಪಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಹಾಗೂ ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಲೇರಿದ ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿನಿಯರು ಇದೀಗ ಉಚ್ಛ ನ್ಯಾಯಾಲಯದ ನ್ಯಾಯಯುತ ತೀರ್ಪನ್ನು ಗೌರವಿಸದೆ ಧಿಕ್ಕರಿಸಿರುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆಯಲ್ಲ.
ಸಂವಿಧಾನ ಮತ್ತು ಈ ನೆಲದ ಕಾನೂನಿಗೆ ಗೌರವ ನೀಡದೆ ಕೋರ್ಟ್ ತೀರ್ಪಿನ ವಿರುದ್ಧ ಬಂದ್ ಆಚರಿಸುವುದು ಹಿಜಾಬ್ ವಿವಾದವನ್ನು ಇನ್ನಷ್ಟು ಜೀವಂತವಾಗಿರಿಸುವ ಹುನ್ನಾರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ನ್ಯಾಯಕ್ಕಾಗಿ ಹೈಕೋರ್ಟಿಗೆ ಮೊರೆ ಹೋದವರೇ ಇದೀಗ ಉಚ್ಛ ನ್ಯಾಯಾಲಯದ ತೀರ್ಪನ್ನು ಪಾಲನೆ ಮಾಡದೇ ಇರುವುದಾದರೆ ನ್ಯಾಯಾಲಯಕ್ಕೆ ಹೋಗುವ ಔಚಿತ್ಯವಾದರೂ ಏನಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ವಿರೋಧಿಸಿ ಬಂದ್ ನಡೆಸಿರುವುದು ಮಾತ್ರವಲ್ಲದೆ, ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಕೆಲವೆಡೆ ಹಿಜಾಬ್ ಧರಿಸಿ ತರಗತಿಗೆ ಹೋಗುವ ಪ್ರಯತ್ನ ನಡೆಸಿರುವುದು ಕಂಡರೆ ಇದರ ಹಿಂದೆ ದೇಶ ವಿರೋಧಿ ಮನಸ್ಥಿತಿಯ ಸಿ.ಎಫ್.ಐ., ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ. ನಂತಹ ಮೂಲಭೂತವಾದಿ ಸಂಘಟನೆಗಳ ಸಂಚು ಇರುವುದು ಸ್ಪಷ್ಟವಾಗುತ್ತದೆ.
ಶಿಕ್ಷಣ ವಿದ್ಯಾರ್ಥಿ ಜೀವನದ ಬಹಳ ಪ್ರಮುಖ ಅಂಗವಾಗಿದೆ. ಶಿಕ್ಷಣ ಸಂಸ್ಥೆಗಳ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದೇ ಸಮವಸ್ತ್ರವನ್ನು ಪಾಲನೆ ಮಾಡುವ ಬಗ್ಗೆ ಉಚ್ಛ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಸಾಮರಸ್ಯತೆಗೆ ಪೂರಕವಾಗಿದ್ದು, ವಿದ್ಯಾರ್ಥಿ ಸಮುದಾಯ ಈ ಆದೇಶವನ್ನು ಗೌರವಿಸಿ ವಿದ್ಯಾರ್ಜನೆಗೆ ಅತ್ಯಂತ ಹೆಚ್ಚಿನ ಮಹತ್ವ ನೀಡುವುದು ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಸಮಾಜದಲ್ಲಿ ನಿರಂತರವಾಗಿ ಶಾಂತಿ ಕದಡುವ ಪ್ರಯತ್ನಗಳು ಕೆಲವು ಮತಾಂಧ ಸಮಾಜ ಘಾತುಕ ಸಂಘಟನೆಗಳಿಂದ ನಡೆಯುತ್ತಿದ್ದು, ಈ ಪ್ರಕ್ರಿಯೆಯಿಂದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಿಂದ ವಂಚಿತರಾಗುವುದು ಉಚಿತವಲ್ಲ. ಸಿ.ಎಫ್.ಐ., ಪಿ.ಎಫ್.ಐ. ನಂತಹ ದೇಶ ವಿರೋಧಿ ಸಂಘಟನೆಗಳು ನೀಡುವ ಮತಾಂಧತೆಯ ಶಿಕ್ಷಣಕ್ಕೆ ಮಣೆ ಹಾಕದೆ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ಪಡೆಯುವುದು ಅತ್ಯವಶ್ಯಕವಾಗಿದೆ.
ಅಂತೆಯೇ ಮುಸ್ಲಿಂ ಸಮುದಾಯ ದೇಶದ ಐಕ್ಯತೆಯ ದೃಷ್ಠಿಯಿಂದ ತಮ್ಮ ಮಾನಸಿಕತೆಯನ್ನು ಬದಲಾಯಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಮರಸ್ಯತೆಗೆ ಒತ್ತು ನೀಡಿ ಸೌಹಾರ್ದಮಯ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.