ಉಡುಪಿ: ಏ.2ರಿಂದ 10ರ ವರೆಗೆ ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಉಡುಪಿ: ಇಲ್ಲಿನ ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏಪ್ರಿಲ್ 2 ರಿಂದ 10ರ ವರೆಗೆ ದೇವಸ್ಥಾನದ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಉಡುಪಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಜೀರ್ಣೋದ್ಧಾರ ಸಮಿತಿ‌ಯ ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ‌ ಆಚಾರ್ಯ ಮಾಹಿತಿ ನೀಡಿದರು.

ಪುತ್ತೂರು ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀದೇವಿಗೆ ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಏ.2 ರಂದು ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಬ್ರಹ್ಮಕೂರ್ಚಹೋಮ, ಗಣಹೋಮ ಹಾಗೂ ಸಂಜೆ ಗೋಪೂಜೆ, ರಾಕ್ಷೋಘ್ನಹೋಮ, ವಾಸ್ತುಹೋಮ ಜರುಗಲಿದೆ ಎಂದರು.

ಏ.3 ರಂದು ಬೆಳಿಗ್ಗೆ ದುರ್ಗಾಶಾಂತಿ ಹೋಮ, ದೇವಿ ಪುನಃಪ್ರತಿಷ್ಠೆ, ಅಷ್ಟಬಂಧ, ಸುಬ್ರಹ್ಮಣ್ಯ ಪ್ರತಿಷ್ಠೆ, ಶಕ್ತಿಯಾಗ, ಪೀಠಿಕಾಯಾಗ, ಪ್ರತಿಷ್ಠಾಹೋಮ, ಆಶ್ಲೇಷಾಬಲಿ, ನವಕಪ್ರಧಾನಹೋಮ, ಸುಬ್ರಹ್ಮಣ್ಯ ಕಲಶಾಧಿವಾಸ ಹೋಮ ಹಾಗೂ ಸಂಜೆ ಕಲ್ಕುಡ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ದೈವಗಳಿಗೆ ನವಕ ಪ್ರಧಾನ ಹೋಮ ನೆರವೇರಲಿದೆ.

ಏ.4 ರಂದು ಬೆಳಿಗ್ಗೆ ದುರ್ಗಾಪ್ರಾಯಶ್ಚಿತ್ತ ಹೋಮ, ಮಹಾಮೃತ್ಯುಂಜಯ ಹೋಮ, ಶ್ರೀ ಸೂಕ್ತ ಪುರುಷಸೂಕ್ತ ಹೋಮ, ನವಗ್ರಹ ಹೋಮ ಮತ್ತು ಸಂಜೆ ಮಹಾಸುದರ್ಶನ ಹೋಮ, ಅಘೋರ ಹೋಮ, ವನದುರ್ಗಾಹೋಮ, ಏ.5 ರಂದು ಬೆಳಿಗ್ಗೆ ಮೂಲಮಂತ್ರಹೋಮ, ದುರ್ಗಾಹೋಮ, ಗಣಪತಿ ಕಲಶಾಧಿವಾಸ ಹೋಮ ಮತ್ತು ಸಂಜೆ ವಾಸ್ತುಪೂಜೆ, ಮಂಡಲ ರಚನೆ, ಗೋಪುರ ಶಿಖರ ಪ್ರತಿಷ್ಠೆ ಜರುಗಲಿದೆ ಎಂದು ತಿಳಿಸಿದರು.

ಏ.6 ಕ್ಕೆ ಬ್ರಹ್ಮಕಲಶೋತ್ಸವ: 

ಏ.6 ರಂದು ಬೆಳಿಗ್ಗೆ 9.10ಕ್ಕೆ ಬ್ರಹ್ಮಕಲಶಾಭಿಷೇಕ, ಪಲ್ಲಪೂಜೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಅಂದು ಸಂಜೆ ಉತ್ಸವ, ರಂಗಪೂಜೆ, ಭೂತಬಲಿ ನೆರವೇರಲಿದೆ. ಏ.7 ರಂದು ಬೆಳಿಗ್ಗೆ ನವಚಂಡಿಕಾಯಾಗ, ಏ.8 ರಂದು ಬೆಳಿಗ್ಗೆ ಕೋಟಿ ಕುಂಕುಮಾರ್ಚನೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಮುರಳೀಧರ ಬಲ್ಲಾಳ್, ಕಾರ್ಯದರ್ಶಿ ದಿನೇಶ್ ಬೀಡು, ಉಪಾಧ್ಯಕ್ಷ ನಾಗೇಶ್ ಭಟ್, ಕಡೆಕಾರು ಗ್ರಾಪಂ ಉಪಾಧ್ಯಕ್ಷ ನವೀನ್ ಶೆಟ್ಟಿ, ಅರ್ಚಕ ಗುರುರಾಜ್ ಉಪಾಧ್ಯಾಯ ಹಾಗೂ ಆಡಳಿತ ಮಂಡಳಿಯ ಮಾಜಿ ಸದಸ್ಯ ನಾರಾಯಣ ರಾವ್ ಇದ್ದರು.