ಉಡುಪಿ, ಮಾ.7: ಕಾರ್ಮಿಕ ಇಲಾಖೆ ಉಡುಪಿ ಮತ್ತು ಚಿನ್ನ ಬೆಳ್ಳಿ ಆಭರಣ ತಯಾರಿಕಾ ಕಾರ್ಮಿಕರು, ವ್ಯವಹಾರ ಕಾಂಪ್ಲೇಕ್ಸ್, ವಳಕಾಡು, ಉಡುಪಿ ಇವರ ಸಹಯೋಗದೊಂದಿಗೆ ವಳಕಾಡು ವ್ಯವಹಾರ ಕಾಂಪ್ಲೆಕ್ಸ್ನಲ್ಲಿ ಪಿಂಚಣಿ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ ಮತ್ತು ನೋಂದಣಿ ಶಿಬಿರ ಇಂದು ನಡೆಯಿತು.
ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಪಿಂಚಣಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್- ಧನ್ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 18 ವರ್ಷದಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಯಲ್ಲಿ ಅರ್ಹರಾಗಿರುತ್ತಾರೆ.
ಅವರು ಆದಾಯ ತೆರಿಗೆ, ಇ.ಎಸ್.ಐ,ಪಿ.ಎಫ್, ಎನ್.ಪಿ.ಎಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. 18 ವರ್ಷದ ಕಾರ್ಮಿಕರು 55 ರೂ. ಹಾಗೂ 40 ವರ್ಷದ ಕಾರ್ಮಿಕರು 200 ರೂ. ವಂತಿಕೆಯನ್ನು ಪ್ರತಿ ತಿಂಗಳು ಪಾವತಿಸುವ ವಂತಿಕೆಯ ಸಮಾನಂತರವಾಗಿ ಕೇಂದ್ರ ಸರ್ಕಾರವು ಪಾವತಿಸುತ್ತದೆ. ಫಲಾನುಭವಿಯು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂ.ಗಳ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ. 7 ದಿನ ನಡೆಯುವ ಪಿಂಚಣಿ ಸಪ್ತಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಲ್ಲಾ ಅಸಂಘಟಿತ ಕಾರ್ಮಿಕರು ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಮಾತನಾಡಿ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್- ಧನ್ ಯೋಜನೆಯು ಮಹತ್ವವನ್ನು ತಿಳಿಸಿ, ಜಿಲ್ಲೆಯಲ್ಲಿ 7 ದಿನ ನಡೆಯುವ ಈ ಪಿಂಚಣಿ ಸಪ್ತಾಹ ಕಾರ್ಯಕ್ರಮವನ್ನು ಎಲ್ಲಾ ಅಸಂಘಟಿತ ಕಾರ್ಮಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಳಕಾಡು ವ್ಯವಹಾರ ಇಂಡಸ್ಟ್ರೀಸ್ ಮಾಲೀಕ ಅಲೆವೂರು ಸುಂದರ ಆಚಾರ್ಯ, ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಜಿಲ್ಲಾ ವ್ಯವಸ್ಥಾಪಕ ನಿತೀಶ್, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಜಿಲ್ಲಾ ಅಧ್ಯಕ್ಷ ಕಿಶೋರ್ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.