ಉಕ್ರೇನ್ ನಲ್ಲಿ ರಷ್ಯಾ ಸೇನಾ ಪಡೆಯ ದಾಳಿ ಮುಂದುವರಿದ್ದು, ಯುದ್ಧ ಬಾಧಿತ ಉಕ್ರೇನ್‌ನಲ್ಲಿದ್ದ ಉಡುಪಿ ಜಿಲ್ಲೆಗೆ ಸೇರಿದ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಇಬ್ಬರು ಈಗಾಗಲೇ ಸುರಕ್ಷಿತವಾಗಿ ತಮ್ಮ ತಮ್ಮ ಕುಟುಂಬವನ್ನು ಕೂಡಿಕೊಂಡರೆ, ಮೂವರು ಉಕ್ರೇನ್ ಗಡಿ ದಾಟಿದ್ದು, ತಾಯ್ನಿಡಿಗೆ ಬರುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
ಆದರೆ ಇಬ್ಬರು ವಿದ್ಯಾರ್ಥಿಗಳು ಮಾತ್ರ ಇನ್ನೂ ಬಂಕರ್‌ಗಳಲ್ಲಿದ್ದು, ಮುಂದಿನ ನಿರ್ಧಾರಕ್ಕಾಗಿ ಇಲ್ಲಿನ ರಾಯಭಾರ ಕಚೇರಿಯ ಸೂಚನೆಯನ್ನು ಎದುರು ನೋಡುತ್ತಿದ್ದಾರೆ.
ಉಕ್ರೇನಿನ ಟೌನ್ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿರುವ ಕೆಮ್ಮಣ್ಣಿನ 19ವರ್ಷದ ಗ್ಲೆನ್‌ವಿಲ್ ಫೆರ್ನಾಂಡೀಸ್ ಹಾಸ್ಟಲ್ ಸಮೀಪದ ಬಂಕರ್‌ನಲ್ಲಿದ್ದರೆ, ಖಾರ್ಕೀವ್ ನೇಶನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿನಿ ಕಲ್ಯಾಣಪುರದ 20 ವರ್ಷದ ಅನಿಫ್ರೆಡ್ ರಿಡ್ಲೆ ಡಿಸೋಜ ಅವರು ಸಹ ವಿವಿ ಹಾಸ್ಟೆಲ್ ಬಂಕರ್‌ನಲ್ಲಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಬಂದ ಮಾಹಿತಿ ತಿಳಿಸಿದೆ.
ಏಳು ಮಂದಿಯ ಪೈಕಿ ಉದ್ಯಾವರ ಸ್ಮಾಲರದ ರಾಜೀವ್‌ರ ಮಗ ಮೃಣಾಲ್ ಮನೆ ಸೇರಿದ್ದು, ಉಡುಪಿಯ ನಂದಿನಿ ಅರುಣ್ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ ವಿಮಾನ ನಿಲ್ದಾಣದಿಂದ ಖಾಸಗಿ ಏರ್ ಎಮಿರೇಟ್ಸ್ ವಿಮಾನದಲ್ಲಿ ಮಸ್ಕತ್‌ಗೆ ಪ್ರಯಾಣಿಸಿ ಅಲ್ಲಿ ಉದ್ಯೋಗಿಯಾಗಿರುವ ತಂದೆಯ ಮನೆಯನ್ನು ಸೇರಿಕೊಂಡಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ.
ಉಳಿದಂತೆ ಪರ್ಕಳ ಮೂಲದ ನಿಯಮ್ ರಾಘವೇಂದ್ರ (20) ಉಕ್ರೇನ್ ಗಡಿ ದಾಟಿ ರೊಮೇನಿಯಾ ತಲುಪಿದ್ದಾರೆ. ಅವರು ಬುಕಾರೆಸ್ಟ್‌ನಿಂದ ಹೊಸದಿಲ್ಲಿಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ.
ಖಾರ್ಕೀವ್‌ನ ನೇಶನಲ್ ಮೆಡಿಕಲ್ ಯುನಿವರ್ಸಿಟಿಯ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಬ್ರಹ್ಮಾವರ ರೋಹನ್ ಬಗ್ಲಿ ಖಾರ್ಕೀವ್‌ನಿಂದ ಲೈವಿಗೆ ಬಂದಿದ್ದು, ಅಲ್ಲಿಂದ ಹಂಗೇರಿಯ ಬುಡಾಪೆಸ್ಟ್ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಹಂಗೇರಿ ಯಿಂದ ಅವರು ಎರಡು ದಿನದೊಳಗೆ ಹೊಸದಿಲ್ಲಿಗೆ ಬರುವ ನಿರೀಕ್ಷೆ ಇದೆ.
ಖಾರ್ಕೀವ್‌ನಲ್ಲಿ ಕಲಿಯುತ್ತಿರುವ ತ್ರಾಸಿಯ ಅಂಕಿತ ಜಗದೀಶ್ ಪೂಜಾರಿ ಅವರು ಲೈವಿ ಮೂಲಕ ಪೊಲಂಡ್‌ಗೆ ತೆರಳಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಬಂದ ಮಾಹಿತಿ ತಿಳಿಸಿದೆ.