ಉಡುಪಿ: ಬಸ್ ಮತ್ತು ಸ್ಕೂಟರ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗಳು ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂತೆಕಟ್ಟೆ ಜಂಕ್ಷನ್ ನಲ್ಲಿ ನಡೆದಿದೆ.
ಮೃತರನ್ನು ಗರಡಿಮಜಲು ನಿವಾಸಿಗಳಾದ 58 ವರ್ಷದ ಗಣೇಶ್ ಪೈ ಮತ್ತು ಅವರ ಮಗಳು ಗಾಯತ್ರಿ ಪೈ ಎಂದು ಗುರುತಿಸಲಾಗಿದೆ. ಗಣೇಶ್ ಅವರು ಹುಬ್ಬಳಿಯಿಂದ ಆಗಮಿಸಿದ್ದ ತನ್ನ ಮಗಳು ಗಾಯತ್ರಿ ಪೈ ಅವರನ್ನು ಕರೆದುಕೊಂಡು ಹೋಗಲು ಸ್ಕೂಟರ್ ನಲ್ಲಿ ಬಂದಿದ್ದರು.
ಆಕೆಯನ್ನು ಕರೆದುಕೊಂಡು ಸಂತೆಕಟ್ಟೆ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದಾಗ ಕೇರಳದಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಣೇಶ್ ಪೈ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಉಡುಪಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಣೇಶ್ ಪೈ ಕರಾವಳಿ ಕಾವಲು ಪಡೆಯಲ್ಲಿ ಎಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.