ಮಧ್ವ ಪರಂಪರೆಯ ಐತಿಹಾಸಿಕ ಮಹಿಮೆ: ತಂದೆಯವರು ತೋರಿಸಿದ ಪುರಾಣ ದರ್ಶನವಿದು!: ಲಾತವ್ಯ ಬರಹ

ತಪಸ್ಸು ಶ್ರೀನೃಸಿಂಹ ದೇವರಿಗಾಗಿ.. ಒಲಿದದ್ದು ರುದ್ರದೇವರು.. ಹರಿದದ್ದು ಶ್ರೀಪಾದರ ಕಣ್ಣೀರ ಕೋಡಿ..

ನಮ್ಮ ಬಾಲ್ಯದಲ್ಲಿ ತಂದೆ ಶ್ರೀ ವಿಠಲ ಆಚಾರ್ಯರು ಧರ್ಮ, ದೇವರುಗಳಿಗೆ ಸಂಬಂಧಿಸಿದ ಏನಾದರೊಂದು ಕತೆಯನ್ನೋ ಇಲ್ಲಾ ಅವರ ಅನುಭವವನ್ನೋ ಆಗಾಗ್ಗೆ ತೆರೆದಿಡುತ್ತಿದ್ದರು. ಅವರು ಹೇಳುತ್ತಿದ್ದ ಕೆಲವು ಸತ್ಯ ಘಟನೆಗಳು ದಂತ ಕತೆಗಳಂತೆ ಭಾಸವಾಗುತ್ತಿತ್ತು.

ಇದೂ ಸಾಧ್ಯವೇ ಅನ್ನುವಷ್ಟರ ಮಟ್ಟಿಗೆ ಸಂಕೀರ್ಣತೆಯಿಂದ ಕೂಡಿರುತ್ತಿದ್ದವು.

ಒಮ್ಮೆ 90ರ ದಶಕದಲ್ಲಿ ತಂದೆಯವರು ಹೇಳಿದ್ದ ಒಂದು ಘಟನೆಯನ್ನು ಬೆಂಬತ್ತಿ ಸಾಗಿದಾಗ ನಾನು ಮೂಕವಿಸ್ಮಿತನಾಗಿದ್ದೆ..

ಆಚಾರ್ಯ ಮಧ್ವರ ಯತಿ ಪರಂಪರೆಯಲ್ಲಿ ಸಂಭವಿಸಿದ ಅಪೂರ್ವ ಘಟನೆ ಇದು.

16ನೇ ಶತಮಾನದಲ್ಲಿ ಜರಗಿದ ಯತಿಯೊಬ್ಬರ ಸಾಧನೆಯ ಕುರಿತಾದ ಪುಣ್ಯ ಕಥೆ.

ಶ್ರೀ ಕಾಣಿಯೂರು ಮಠದ ಗುರು ಪರಂಪರೆಯ 15ನೇ ಯತಿಗಳಾದ ಶ್ರೀವಿದ್ಯಾಧೀಶತೀರ್ಥರು ಶ್ರೀ ನರಸಿಂಹ ದೇವರ ಮಹಾನ್ ಉಪಾಸಕರು. ಅವರು ನೃಸಿಂಹ ಹಾಗೂ ರುದ್ರದೇವರ ಕಾರಣಿಕದ ಸನ್ನಿಧಾನವಾದ ಕಡೇಶಿವಾಲಯ ದೇವಾಲಯದ (ಮಂಗಳೂರು ಸಮೀಪ) ನೇತ್ರಾವತಿ ತಟದಲ್ಲಿ ಶ್ರೀ ನೃಸಿಂಹ ದೇವರ ಏಕಾಕ್ಷರೀ ಮಂತ್ರ ಜಪಿಸುತ್ತಾ ಕಠಿಣ ತಪೋನಿರತರಾದರು. ಅನ್ನ ಆಹಾರ ಸರ್ವತ್ರ ತ್ಯಜಿಸಿ ಶ್ರೀ ನರಸಿಂಹ ದೇವರನ್ನು ಒಲಿಸಿಕೊಳ್ಳಲು ವರ್ಷಾನುಗಟ್ಟಲೆ ನಡೆಸಿದ ಕಠೋರ ಉಪಾಸನೆಗೆ ರುದ್ರದೇವರು ಪ್ರತ್ಯಕ್ಷರಾದರು.

ಬೆರಗಾದ ಯತಿಗಳು ಆಶ್ಚರ್ಯದಿಂದ ರುದ್ರದೇವರಲ್ಲಿ ಹೇಳಿದರು.”ನಾವು ಶ್ರೀ ನರಸಿಂಹ ದೇವರನ್ನು ಪ್ರಾರ್ಥಿಸಿ ತಪಸ್ಸನ್ನು ನಡೆಸಿದೆವು. ನೀವು ಪ್ರತ್ಯಕ್ಷರಾದಿರಿ. ಇದರ ಮರ್ಮ ನಮಗೆ ಅರಿವಾಗಲಿಲ್ಲ” ಎಂದು ಹೇಳಿದಾಗ ರುದ್ರದೇವರು ಅಂದರು. “ಯತಿಗಳೇ ನೀವು ಮುಂದಿನ ಅನೇಕ ಜನ್ಮಗಳಲ್ಲಿ ಬರುವ ಎಲ್ಲಾ ಪ್ರಾರಬ್ಧ ಕರ್ಮಗಳನ್ನು ಇದೇ ಜನ್ಮದಲ್ಲಿ ಕೊನೆಗಾಣಿಸಿ ಭಗವಂತನ ಶಾಶ್ವತ ಸೌಖ್ಯ ಬಯಸಿ ತಪಸ್ಸು ನಡೆಸಿದ್ದೀರಿ. ನಿಮ್ಮ ಪ್ರಾರ್ಥನೆಯನ್ನು ನಡೆಸಿಕೊಡಲು ಶ್ರೀನೃಸಿಂಹ ದೇವರ ಆಜ್ಞಾನುಸಾರ ನಾನು ನಿಮ್ಮ ಬಳಿ ಬಂದಿದ್ದೇನೆ” ಎಂದು ರುದ್ರದೇವರು ತಿಳಿಸಿದರು. “ಆದರೆ ಕಾಲ ನಿಯಮಾನುಸಾರ ನೀವು ಮುಂದಿನ ಹತ್ತು ಜನ್ಮದಲ್ಲಿ ಹುಟ್ಟಿ ಬಂದು ಬಹಳಷ್ಟು ಸುಖ ದುಃಖಗಳನ್ನು ಅನುಭವಿಸಲು ಬಾಕಿ ಇದೆ” ಎಂದು ರುದ್ರದೇವರು ತಿಳಿಸಿದರು.

ಆ ಮಾತಿಗೆ ಪ್ರತಿಕ್ರಿಯಿಸಿದ ಯತಿಗಳು “ದಯವಿಟ್ಟು ನನಗೆ ಮುಂದೆಂದೂ ಜನ್ಮವನ್ನು ಕೊಡದಿರಿ. ಈ ಜನ್ಮದಲ್ಲೆ ಮುಂದಿನ 10 ಜನ್ಮಗಳ ಎಲ್ಲಾ ಪ್ರಾರಬ್ಧ ಕರ್ಮಗಳನ್ನು ಅನುಭವಿಸಲು ಸಿದ್ಧನಿದ್ದೇನೆ ನನ್ನನ್ನು ಅನುಗ್ರಹಿಸಿ” ಎಂದು ರುದ್ರದೇವರಲ್ಲಿ ಕೇಳಿಕೊಂಡರು. ರುದ್ರದೇವರು ಯತಿಗಳ ಕೋರಿಕೆಯನ್ನು ಅನುಗ್ರಹಿಸಿ ಅದೃಶ್ಯರಾದರು.

ಈ ನಿಮಿತ್ತ ಯತಿಗಳು ರುದ್ರದೇವರ ಆಜ್ಞೆಯಂತೆ ಮುಂದಿನ ಹತ್ತು ಜನ್ಮಗಳ ಎಲ್ಲಾ ಕಷ್ಟ, ನಷ್ಟ, ನೋವು, ದುಃಖಗಳನ್ನು ಒಂದೇ ಜನ್ಮದಲ್ಲಿ ಸ್ವೀಕರಿಸಿ ಅನುಭವಿಸುವಂತಹ ಅಸಾಧ್ಯ ಗುರಿಯನ್ನು ಒಪ್ಪಿಕೊಂಡರು.

ಉಡುಪಿಗೆ ಬಂದು ತಮ್ಮ ಶಿಷ್ಯ ಶ್ರೀ ವಿಬುಧೇಶತೀರ್ಥರಿಗೆ ಪೂಜಾ ಕೈಂಕರ್ಯ ಹಾಗೂ ಸಂಸ್ಥಾನವನ್ನು ಒಪ್ಪಿಸಿ ನೇತ್ರಾವತಿ ನದಿ ಸಮೀಪದ  ಬಲ್ಯ ಎಂಬ ವನಪ್ರದೇಶದಲ್ಲಿ ಶ್ರೀನೃಸಿಂಹದೇವರ ಅನನ್ಯ ಉಪಾಸನೆ ಆರಂಭಿಸಿದರು. ತಪಸ್ಸಿನ  ಜೊತೆ ಜೊತೆಗೆ ಹತ್ತೂ ಜನ್ಮಗಳ ಅಷ್ಟೂ ಕಷ್ಟಕೋಟಲೆ ಖಾಯಿಲೆಗಳನ್ನು ಒಂದೇ ಜನ್ಮದಲ್ಲಿ ಎದುರಿಸಿದರು.

ಸುಮಾರು 25 ವರ್ಷಗಳ ಕಾಲ ನಿರಂತರವಾಗಿ ಎಲ್ಲಾ ಹತ್ತೂ ಜನ್ಮಗಳ ಕಷ್ಟ, ದುಃಖ, ನೋವುಗಳನ್ನು ಏಕಕಾಲದಲ್ಲಿ ಸ್ವೀಕರಿಸಿ 1614ನೇ ಇಸವಿ ಆನಂದ ಸಂವತ್ಸರ ಪುಷ್ಯ ಶುದ್ಧ ದಶಮಿಯಂದು ನಿರ್ಯಾಣ ಹೊಂದಿದರು.

ಉಪಾಸನೆಯ ಸಂದರ್ಭದಲ್ಲಿ ಹತ್ತೂ ಜನ್ಮಗಳ ನೋವುಗಳು ಯತಿಗಳನ್ನು ವಿಪರೀತವಾಗಿ ಬಾದಿಸಿದಾಗ ಆ ಸಂದರ್ಭದಲ್ಲಿ ನೋವನ್ನು ತಡೆಯಲಾಗದೆ ವೇದನೆಯಿಂದ ಯತಿಗಳ ಕಣ್ಣಲ್ಲಿ ಕಣ್ಣೀರ ಕೋಡಿಯೇ ಹರಿಯಿತು. ಆ ಕಣ್ಣೀರಿನಿಂದ ಅಲ್ಲೇ ಒಂದು ಕಣ್ಣೀರ ಗುಂಡಿ ನಿರ್ಮಾಣವಾಯಿತು.

ಭಗವಂತನ ಸಖ್ಯಕ್ಕಾಗಿ ಯತಿಗಳೊಬ್ಬರ ಈ ತೆರನಾದ ತ್ಯಾಗ, ತಪಸ್ಸು ಇತಿಹಾಸದ ಪುಟದಲ್ಲಿ ಎಲ್ಲೂ ಕಾಣ ಸಿಗದು.

ಯತಿಗಳು ಅಂದು ವಾಸ್ತವ್ಯವಿದ್ದ ಬಲ್ಯ ಶ್ರೀನೃಸಿಂಹ ಮಠದಲ್ಲಿ ಶ್ರೀಗಳು ನಿತ್ಯೋಪಾಸನೆ ನಡೆಸುತ್ತಿದ್ದ ಬೃಹತ್ ಶ್ರೀ ಲಕ್ಷ್ಮೀ ನೃಸಿಂಹ ಶಾಲಗ್ರಾಮ ಇಂದಿಗೂ ಇದೆ. ಹಾಗೂ ಅವರ ವೃಂದಾವನದ ಪಕ್ಕದಲ್ಲೇ ಕಣ್ಣೀರಗುಂಡಿಯೂ ಇದೆ.

ವಿಶೇಷವೆಂದರೆ ಕಣ್ಣೀರ ಗುಂಡಿಯ ನೀರಿನ ಬಣ್ಣ, ಗುಣ, ಅದರ ಸಾಂದ್ರತೆಯು ಸಾಮಾನ್ಯ ನೀರಿನ ಗುಣಕ್ಕಿಂತ ತೀರಾ ವಿಭಿನ್ನ. ಆದರೆ ಇತ್ತೀಚೆಗೆ ಸ್ಥಳೀಯರು ಕೆಲವೊಂದು ಕಾರಣಗಳಿಗಾಗಿ ಕಣ್ಣೀರ ಗುಂಡಿಗೆ ಹಾಸುಗಲ್ಲನ್ನು ಹೊದೆಸಿದ್ದಾರೆ.

ಯತಿಗಳ ಅಪೂರ್ವ ಮಹಿಮೆಯ ಈ ಎಲ್ಲಾ ವಿವರಗಳ ಶಾಸನವು (೨೦೧) ಉಡುಪಿ ಶ್ರೀಕೃಷ್ಣಮಠದ ಪಶ್ಚಿಮ ದಿಕ್ಕಿನ ಗೋಡೆಯಲ್ಲಿದೆ. ಹಾಗೂ ಕೈಫಿಯತ್ತಿನಲ್ಲೂ ಉಲ್ಲೇಖಗೊಂಡಿದೆ.

ಇದಾವುದೂ ಮೌಖಿಕ ಪರಂಪರೆಯಲ್ಲಿ ಹರಿದು ಬಂದ ಕಥೆಯಲ್ಲ. ಇತಿಹಾಸಗಳ ಪುಟದಲ್ಲಿ ಅಚ್ಚಾಗಿರುವ ಮಾಧ್ವ ಪರಂಪರೆಯ ಯತಿಯೊಬ್ಬರ ಸಿದ್ಧಿ ಸಾಧನೆಯ ಮಹಿಮೆ.

ತಂದೆ ವಿಠಲಾಚಾರ್ಯರು ಹೇಳಿದ ಕಥೆಯ ಪ್ರೇರಣೆಯಿಂದಾಗಿ ಮಧ್ವ ಪರಂಪರೆಯ ಐತಿಹಾಸಿಕ ಮಹಿಮೆ ಮತ್ತು ಪುಣ್ಯಕ್ಷೇತ್ರದ ದರ್ಶನ ಪ್ರಾಪ್ತವಾಯಿತು.

ಆತ್ಮೀಯರೇ

ಶಿವರಾತ್ರಿಯ ಪರ್ವಕಾಲದಲ್ಲಿ ನಾವಿದ್ದೇವೆ. ಈ ಶುಭ ಸಂದರ್ಭದಲ್ಲಿ ಶ್ರೀ ಕಾಣಿಯೂರು ಮಠದ ಮಹಾನ್ ತಪಸ್ವಿ ಸಾಧಕ ಶ್ರೀವಿದ್ಯಾಧೀಶ ತೀರ್ಥರ ಪೂರ್ಣಾನುಗ್ರಹ ಸರ್ವರಿಗೂ ಕರುಣವಾಗಲಿ.

ಲೋಕದಲ್ಲಿ ಸುಖ, ಶಾಂತಿ, ಸಮೃದ್ಧಿ ಅನವರತವಿರಲಿ ಎಂದು ಪ್ರಾರ್ಥಿಸುತ್ತಾ ಈ ಬರಹವನ್ನು ಶ್ರೀರುದ್ರಾಂತರ್ಗತ ಶ್ರೀನೃಸಿಂಹ ದೇವರ ಪಾದ ಕಮಲಗಳಿಗೆ ಅರ್ಪಿಸುತ್ತಿದ್ದೇನೆ.

ಬರಹ: ಪಿ.ಲಾತವ್ಯ ಆಚಾರ್ಯ ಉಡುಪಿ.