ಮಣಿಪಾಲ: ರಷ್ಯಾ- ಉಕ್ರೇನ್ ಸಂಘರ್ಷದ ಈ ಸಂದರ್ಭದಲ್ಲಿ ಯುದ್ಧ ಅಪೇಕ್ಷಣೀಯ ಆಯ್ಕೆಯಲ್ಲ ಎಂದು ಯುನೆಸ್ಕೋ ಶಾಂತಿ ಪೀಠದ ಪ್ರೊ.ಎಂ.ಡಿ ನಲಪತ್ ಹೇಳಿದರು.
“ಕಳೆದ ಕೆಲವು ವರ್ಷಗಳಲ್ಲಿನ ಭೌಗೋಳಿಕ ರಾಜಕೀಯ ಸನ್ನಿವೇಶಗಳು ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿವೆ, ಆದರೆ ಸೇನಾ ದಾಳಿಯ ಆಯ್ಕೆ ಇದಕ್ಕೆ ಪರಿಹಾರವಲ್ಲ” ಎಂದು ಅವರು ಪ್ರತಿಪಾದಿಸಿದರು.
ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಮಾಹೆಯ ಆಶ್ರಯದಲ್ಲಿ ನಡೆದ ‘ರಷ್ಯಾ, ಉಕ್ರೇನ್, ಯುದ್ಧ ಮತ್ತು ಶಾಂತಿ’ ಕುರಿತ ವಿಶೇಷ ಉಪನ್ಯಾಸದಲ್ಲಿ ಯುನೆಸ್ಕೋ ಶಾಂತಿ ಪೀಠದ ಹಿರಿಯ ರಾಜಕೀಯ ವಿಮರ್ಶಕ ಪ್ರೊ.ಎಂ.ಡಿ.ನಲಪತ್ ಮಾತನಾಡುತ್ತಿದ್ದರು.
ಪ್ರೊ.ನಲಪತ್ ಅವರು ದೇಶಗಳ ‘ವಿಸ್ತರಣಾವಾದಿ’ ಪ್ರವೃತ್ತಿಗಳು ಯುದ್ಧಕ್ಕೆ ಕಾರಣ; ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ನಮ್ಮ ಕಾಲದ ಭೌಗೋಳಿಕ ರಾಜಕೀಯವನ್ನು ಮರು ವ್ಯಾಖ್ಯಾನಿಸಬಹುದು ಎಂದ ಅವರು ಈ ಯುದ್ಧವು ಪೂರ್ಣ ಪ್ರಮಾಣದ ಪರಮಾಣು ಯುದ್ಧಕ್ಕೆ ದಾರಿ ಮಾಡದೇ ಇರಲಿ ಎಂದು ಅವರು ಆಶಿಸಿದರು.
ಜಗತ್ತಿನಲ್ಲಿ “ಶಾಂತಿಯ ಧ್ವನಿಗಳು” ಬಲಗೊಳ್ಳಬೇಕು ಎಂಬ ಅಭಿಪ್ರಾಯವನ್ನು ಒಪ್ಪಿದ ಅವರು, ಪ್ರಸ್ತುತ ಪರಿಸ್ಥಿತಿಯು ಶೀತಲ ಸಮರದ ದಿನಗಳತ್ತ ಅಥವಾ ಶಕ್ತಿ ಬಣಗಳ ನಡುವಿನ ನೇರ ಯುದ್ಧಕ್ಕೆ ಕಾರಣವಾಗದೆ ಇರಲಿ ಎಂದು ಮತ್ತೊಮ್ಮೆ ಆಶಿಸಿದರು.
“ನಾನು ಇತರ ವಿಷಯಗಳಲ್ಲಿ ಭಾರತ ಸರ್ಕಾರವನ್ನು ಟೀಕಿಸಬಹುದು ಆದರೆ ಈ ವಿಷಯದಲ್ಲಿ ನಾನು ಕದನ ವಿರಾಮಕ್ಕೆ ಕರೆ ನೀಡಿರುವ ಸರ್ಕಾರದ ನಿಲುವನ್ನು ಸ್ವಾಗತಿಸುತ್ತೇನೆ ಎಂದರು.
ಆಕ್ರಮಣ ಮತ್ತು ಯುದ್ಧದಂತಹ ವಿಷಯಗಳಲ್ಲಿ ಯುನೆಸ್ಕೋ ಸೀಮಿತ ಪಾತ್ರವನ್ನು ಹೊಂದಿದ್ದರೂ ಸಹ, ಮಾತುಕತೆ ಮತ್ತು ಸಂವಾದ ಮೂಲಕ ಶಾಂತಿಯುತ ಪರಿಹಾರ ಕಾಣಲು ಯುಎನ್ಒ ಮುಖ್ಯ ಪಾತ್ರ ವಹಿಸುತ್ತದೆ. ಯುದ್ಧ ಅನಗತ್ಯ ಸಾವುಗಳು ಮತ್ತು ವಿನಾಶಕ್ಕೆ ಮಾತ್ರ ಕಾರಣವಾಗುತ್ತದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಚಾಪ್ಲಿನ್ ನ ‘ದಿ ಗ್ರೇಟ್ ಡಿಕ್ಟೇಟರ್’ ಚಿತ್ರದ ‘ನಾವು ತುಂಬಾ ಯೋಚಿಸುತ್ತೇವೆ ಆದರೆ ಬಹಳ ಕಡಿಮೆ ಭಾವಿಸುತ್ತೇವೆ’ (we think too much and feel too little) ಎಂಬ ಸಾಲನ್ನು ಉಲ್ಲೇಖಿಸಿ ಇತ್ತೀಚೆಗೆ ‘ನಿಶ್ಶಸ್ತ್ರೀಕರಣ ಮತ್ತು ಅಣ್ವಸ್ತ್ರೀಕರಣ’ದ ಬಗ್ಗೆ ನಾವು ಹೆಚ್ಚು ಕೇಳುತ್ತಿಲ್ಲ ಎಂದರು. ಯುದ್ಧದ ವಿರುದ್ಧ ಸಾಮೂಹಿಕ ಜಾಗತಿಕ ಅಭಿಪ್ರಾಯದ ಅಗತ್ಯವನ್ನು ಪ್ರೊ. ಫಣಿರಾಜ್ ಒತ್ತಿ ಹೇಳಿದರು.
ಜಯದೀಪ್ ಜಯೇಶ್ ಕಾರ್ಯಕ್ರಮವನ್ನು ನಿರೂಪಿಸಿದರು ಮಾಡಿದರು. ಲೇಖಕರಾದ ಪ್ರೊ. ಮನು ಚಕ್ರವರ್ತಿ, ಜಿ ಎನ್ ಮೋಹನ್, ಶರ್ಮಿಳಾ, ರೇಸ್ಮಿ ಭಾಸ್ಕರನ್ ಮತ್ತಿತರರು ಉಪಸ್ಥಿತರಿದ್ದರು.