ಉಡುಪಿ: ಕಾರ್ಕಳದಲ್ಲಿ ನಡೆದ ಮುಖ್ಯಮಂತ್ರಿಗಳ ಸಮಾಲೋಚನಾ ಕಾರ್ಯಕ್ರಮದಲ್ಲಿ , ಮುಖ್ಯಮಂತ್ರಿಯವರ ಜೊತೆ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ್ತಿತರರು ಭಾಗವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಒರ್ವ ವ್ಯಕ್ತಿ , ಸರ್ವೆಯಾಗಿರುವ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡುವ ಬಗ್ಗೆ, ಗುತ್ತಿಗೆ ಆಧಾರದಲ್ಲಿ ದಲಿತರಿಗೆ ಅವಕಾಶ ಕಲ್ಪಿಸುವ ಬಗ್ಗೆ ಹಾಗೂ ಸ್ವ ಉದ್ಯೋಗಕ್ಕೆ ಅನುದಾನ ನೀಡುವ ಬಗ್ಗೆ ಮನವಿ ಮಾಡಿರುವುದು ಕಂಡು ಬಂದಿದ್ದು, ಇವರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೊಡವೂರು , ಇಲ್ಲಿನ ಮುಖ್ಯೋಪಧ್ಯಾಯ ಸುಂದರ್ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ 2019 ರ ಮಾರ್ಚ್ 10 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಯಾವುದೇ ರಾಜಕೀಯ ಚುನಾವಣಾ ಪ್ರಚಾರ ಸಭೆ ಸಮಾರಂಭಗಳಲ್ಲಿ ಯಾವುದೇ ಸರ್ಕಾರಿ ನೌಕರರು ಅಧಿಕೃತವಾಗಿ ಭಾಗವಹಿಸಲು ಅವಕಾಶವಿರುವುದಿಲ್ಲ.
ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ರಾಜಕೀಯ ಹಿನ್ನಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಭಾಷಣ ಮಾಡಿ, ಪ್ರಚಾರ ಕಾರ್ಯ ಕೈಗೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದರಿಂದ, ಸುಂದರ್, ಮುಖ್ಯೋಪಧ್ಯಾಯರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ , ಕೊಡವೂರು , ಉಡುಪಿ ತಾಲೂಕು ಇವರನ್ನು , ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ರಂತೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.