ಚದುರಂಗದಾಟದಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್ ನನ್ನು ಸೋಲಿಸಿದ ಭಾರತೀಯ ಬಾಲಕ ಆರ್. ಪ್ರಗ್ನಾನಂದ

 

ಹದಿಹರೆಯದ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ, ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರಾಪಿಡ್ ಚೆಸ್ ಪಂದ್ಯಾವಳಿಯ ಎಂಟನೇ ಸುತ್ತಿನಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸ್, ನಾರ್ವೇಜಿಯನ್ ಸೂಪರ್‌ಸ್ಟಾರ್ ವಿರುದ್ಧ ಜಯ ಸಾಧಿಸಿದ ದೇಶದ ಮೂರನೇ ಆಟಗಾರನೆಸಿಕೊಂಡನು. ಐದು ಬಾರಿಯ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ಪಿ ಹರಿಕೃಷ್ಣ ಅವರ ಸಾಲಿಗೆ ಸೇರಿ ಮ್ಯಾಗ್ನಸ್ ಕಾರ್ಲ್‌ಸೆನ್ ನನ್ನು ಸೋಲಿಸಿದ ಭಾರತದ ಮೂರನೇ ಆಟಗಾರನೆನ್ನುವ ಕೀರ್ತಿಗೆ ಪ್ರಗ್ನಾನಂದ ಭಾಜನನಾದನು.

ಕಾರ್ಲ್‌ಸೆನ್‌ರ ಸತತ ಮೂರು ಗೆಲುವಿನ ಓಟವನ್ನು ನಿಲ್ಲಿಸಲು ಸೋಮವಾರ ನಡೆದ ಟಾರ್ರಾಸ್ಚ್ ಬದಲಾವಣೆಯ ಆಟದಲ್ಲಿ 16ವರ್ಷದ ಪ್ರಗ್ನಾನಂದ, ಕಪ್ಪು ಕಾಯಿಗಳೊಂದಿಗೆ 39 ನಡೆಗಳಲ್ಲಿ ಪಂದ್ಯವನ್ನು ಗೆದ್ದು ದೇಶಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾನೆ.

ರಮೇಶ್ ಬಾಬು ಪ್ರಗ್ನಾನಂದ ಆಗಸ್ಟ್ 10, 2005 ರಂದು ಚೆನ್ನೈನಲ್ಲಿ ಜನಿಸಿದನು. ಈತನ ಸಹೋದರಿ ವೈಶಾಲಿ ರಮೇಶ್ ಬಾಬು ಕೂಡಾ ಅಂತರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ್ತಿ. 12 ಆಗಸ್ಟ್ 2018 ರಂದು ಲಾಟ್ವಿಯಾದ ರಿಗಾದಲ್ಲಿ ರಿಗಾ ಟೆಕ್ನಿಕಲ್ ಯೂನಿವರ್ಸಿಟಿ ಓಪನ್ ಚೆಸ್ ಟೂರ್ನಮೆಂಟ್‌ನಲ್ಲಿ ತನ್ನ ಫೈನಲ್ ನಾರ್ಮ್ ಅನ್ನು ಪೂರ್ಣಗೊಳಿಸುವ ಮೂಲಕ ಆಕೆ ವುಮನ್ ಗ್ರ್ಯಾಂಡ್‌ಮಾಸ್ಟರ್ ಆದಳು. 2021 ರಲ್ಲಿ ಅಂತರರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ಪಡೆದಳು.

ಪ್ರಗ್ನಾನಂದ ಈಗ ಭಾರತದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್. ಇದಕ್ಕಿಂತ ಮೊದಲು, ಪರಿಮಾರ್ಜನ್ ನೇಗಿ 13 ವರ್ಷ, ನಾಲ್ಕು ತಿಂಗಳು ಮತ್ತು 22 ದಿನಗಳಲ್ಲಿ ಮತ್ತು ವಿಶ್ವನಾಥನ್ ಆನಂದ್ 18ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಆಗಿದ್ದರು. 2016ರಲ್ಲಿ(10 ವರ್ಷ, 10 ತಿಂಗಳು ಮತ್ತು 19 ದಿನಗಳು) ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗಿದ್ದ ಪ್ರಗ್ನಾನಂದ, 2013 ರಲ್ಲಿ 8 ವರ್ಷದೊಳಗಿನವರ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದನು. ತನ್ನ 7 ನೇ ವಯಸ್ಸಿನಲ್ಲಿ FIDE ಮಾಸ್ಟರ್ ಎಂಬ ಬಿರುದನ್ನು ಗಳಿಸಿದನು. 2018 ರಲ್ಲಿ (12 ವರ್ಷ, 10 ತಿಂಗಳು ಮತ್ತು 13 ದಿನಗಳು) ಚೆಸ್ ಇತಿಹಾಸದಲ್ಲಿಯೆ ಎರಡನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಬಿರುದನ್ನು ಪಡೆದುಕೊಂಡಿದ್ದನು.

ಚೆಸ್ ಕ್ಷೇತ್ರದ ಅದ್ಭುತವಾಗಿರುವ ಪ್ರಗ್ನಾನಂದ, ಪ್ರಸ್ತುತ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಐದನೇ-ಕಿರಿಯ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರನಾಗಿದ್ದಾನೆ. ಪ್ರಗ್ನಾನಂದ ದೇಶದ ಕೀರ್ತಿ ಪತಾಕೆಯನ್ನು ಇನ್ನೂ ಎತ್ತರಕ್ಕೆ ಹಾರಿಸಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.