ಉಡುಪಿ: ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ಫೆ.20 ರಂದು ನಡೆದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಹಿಂದೂ ಯುವ ಕಾರ್ಯಕರ್ತನ ಹತ್ಯೆ ಪ್ರಕರಣ ಹಿಂದೂ ಸಮಾಜವನ್ನು ಭೀತಿಗೊಳಪಡಿಸುವ ದುಷ್ಕೃತ್ಯವಾಗಿದೆ. ಮೊಗಲ್ ಕಾಲದಿಂದಲೂ ಈ ರೀತಿಯ ಭೀತಿ ಇದ್ದರೂ ಕೂಡಾ ಹಿಂದೂ ಸಮಾಜ ಯಾವುದಕ್ಕೂ ಜಗ್ಗದೆ ತಲೆ ಎತ್ತಿ ನಿಂತಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹಿಂದೂ ಸಮಾಜ ಎಂದೂ ಸೊಪ್ಪು ಹಾಕದು.
ಈ ಹಿಂದೆಯೂ ರಾಜ್ಯದಲ್ಲಿ ನಡೆದ ಹಲವಾರು ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಕಾರಣರಾಗಿರುವ ಸಮಾಜ ಘಾತುಕ ಶಕ್ತಿಗಳ ಕೈವಾಡ ಹರ್ಷ ಹತ್ಯೆಯಲ್ಲೂ ಇದೆಯೋ ಎಂಬ ಬಗ್ಗೆ ಕೂಲಂಕುಷ ತನಿಖೆಯ ಅಗತ್ಯವಿದೆ.
ಈ ನಿಟ್ಟಿನಲ್ಲಿ ಹರ್ಷ ಹತ್ಯೆ ಪ್ರಕರಣವನ್ನು ತಕ್ಷಣ ಎನ್ಐಎ ಗೆ ಹಸ್ತಾಂತರಿಸುವ ಮೂಲಕ ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ ಹಂತಕರಿಗೆ ಕಾನೂನಾತ್ಮಕ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.