ಇಂದಿನಿಂದ ಪ್ರಾಯೋಗಿಕ ಪರೀಕ್ಷೆಗಳು ಶುರು; ಹಾಜರಾಗದವರಿಗೆ ಮರುಪರೀಕ್ಷೆಯೂ ಇಲ್ಲ, ಅಂಕವೂ ಇಲ್ಲ

ಬೆಂಗಳೂರು: ಹಿಜಬ್ ಧರಿಸುವ ಕುರಿತು ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದ್ದರೂ ಅದಕ್ಕೆ ಸೊಪ್ಪು ಹಾಕದೆ ಹಿಜಬ್ ಗಾಗಿ ಪಟ್ಟು ಹಿಡಿದು ಕುಳಿತುಬಿಟ್ಟರೆ ಅಂತಹ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗುವ ಅವಕಾಶವನ್ನು ಕಳೆದುಕೊಳ್ಳಲಿರುವುದು ನಿಶ್ಚಿತ. ಫೆ. 21, ಸೋಮವಾರದಿಂದಲೇ ಪ್ರಾಯೋಗಿಕ ಪರೀಕ್ಷೆಗಳು ಶುರುವಾಗಲಿದ್ದು, ಹಿಜಬ್ ಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಂದು ವೇಳೆ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗದಿದ್ದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಈಗಾಗಲೇ ಹಿಜಬ್ ವಿವಾದದಿಂದಾಗಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮತ್ತೊಮ್ಮೆ ಪರೀಕ್ಷೆಗಳನ್ನು ಮುಂದೂಡುವ ಪ್ರಶ್ನೆಯೆ ಇಲ್ಲ. ಈ ಹಿಂದೆ ನಿಗದಿ ಪಡಿಸಿದಂತೆ ನಿಗದಿತ ವೇಳಾಪಟ್ಟಿಯನುಸಾರ ಪರೀಕ್ಷೆಗಳನ್ನು ನಡೆಸುವಂತೆ ಮತ್ತು ಫೆ. 25 ರೊಳಗೆ ಎಲ್ಲ ಪರೀಕ್ಷೆಗಳನ್ನು ಮುಕ್ತಾಯಗೊಳಿಸುವಂತೆ ಇಲಾಖೆಯು ಹೇಳಿದೆ.

 

ಇಂದಿನಿಂದ ನಡೆಯಲಿರುವ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳು 30 ಅಂಕಗಳನ್ನು ಹೊಂದಿವೆ. ಇದರಲ್ಲಿ 10 ಅಂಕ ಪ್ರಯೋಗಕ್ಕೆ, 10 ಅಂಕ ಪ್ರಯೋಗ ವಿಶ್ಲೇಷಣೆಗೆ, 5 ಅಂಕ ರೆಕಾರ್ಡ್ ಪುಸ್ತಕಕ್ಕೆ, 5 ಅಂಕ ಮೌಖಿಕ ಪ್ರಶ್ನೋತ್ತರಗಳಿಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯನ್ನು ತಪ್ಪಿಸಿಕೊಂಡಲ್ಲಿ ಈ 30 ಅಂಕಗಳ ಆಸೆಯನ್ನು ಸಂಪೂರ್ಣವಾಗಿ ಕೈ ಬಿಟ್ಟುಬಿಡಬೇಕಾಗುತ್ತದೆ. ತನ್ನ ಮುಂದಿನ ಭವಿಷ್ಯ ಉಜ್ವಲವಾಗಿರಬೇಕೆಂದು ಬಯಸುವ ಯಾವೊಬ್ಬ ವಿದ್ಯಾರ್ಥಿಯೂ ಈ 30 ಅಂಕಗಳನ್ನು ಕಳೆದುಕೊಳ್ಳಲು ಇಷ್ಟಪಡಲಾರ. ಪ್ರಾಯೋಗಿಕ ಪರೀಕ್ಷೆಗಳಲ್ಲಿ ಪೂರ್ಣ ಅಂಕಗಳನ್ನು ಪಡೆಯುವ ಅವಕಾಶಗಳೂ ಹೆಚ್ಚಿರುತ್ತವೆ. ವಿದ್ಯಾರ್ಥಿಗಳ ಭವಿಷ್ಯ ಈಗ ವಿದ್ಯಾರ್ಥಿಗಳ ಕೈಯಲ್ಲಿದೆ.