ದಕ್ಷಿಣ ಕನ್ನಡದ 45 ಸರಕಾರಿ ಕಚೇರಿಗಳಲ್ಲಿ ಬಾಕಿ ಉಳಿದಿರುವ 82,400 ಕಡತಗಳನ್ನು ಫೆ.19 ರಿಂದ ಫೆ.28ರೊಳಗೆ ವಿಶೇಷ ಕಡತ ತೆರವು ಅಭಿಯಾನದಡಿ ವಿಲೇವಾರಿ ಮಾಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು.
ಅವರು ಫೆಬ್ರವರಿ 19 ಶುಕ್ರವಾರದಂದು ಮಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಕಡತ ವಿಲೇವಾರಿ ಅಭಿಯಾನಕ್ಕೆ ಚಾಲನೆ ನೀಡುತ್ತಾ ಮಾತನಾಡಿ, ಬಾಕಿ ಉಳಿದಿರುವ ಕಡತಗಳನ್ನು ಬಾಕಿ ಉಳಿದಿರುವ ಹಳೆಯ ಕಡತಗಳು, ಕುಂದುಕೊರತೆಗಳ ಬಾಕಿ ಇರುವ ಅರ್ಜಿಗಳು ಮತ್ತು ಸೇವೆಗಳ ವಿತರಣೆಯ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳು ಎಂದು ವರ್ಗೀಕರಿಸಲಾಗಿದೆ. 28,728 ಹಳೆಯ ಕಡತಗಳು ಮತ್ತು 2,099 ಕುಂದುಕೊರತೆಗಳ ಅರ್ಜಿಗಳು ಬಾಕಿ ಇವೆ. ಇದಲ್ಲದೆ, 51,573 ಕಡತಗಳ ಸೇವೆಗಳ ವಿತರಣೆಯಲ್ಲಿ ಬಾಕಿ ಉಳಿದಿರುವ ಅರ್ಜಿಗಳಾಗಿವೆ ಎಂದು ಮಾಹಿತಿ ನೀಡಿದರು.
ದ.ಕ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಸುನಿಲ್ ಕುಮಾರ್, ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಲಾಕ್‌ಡೌನ್, ರೋಗ ನಿಯಂತ್ರಣ ಕ್ರಮಗಳಿಗಾಗಿ ಅಧಿಕಾರಿಗಳ ನಿಯೋಜನೆ, ತಾಂತ್ರಿಕ ಕಾರಣಗಳು ಮತ್ತು ಅಧಿಕಾರಿಗಳ ಕಡೆಯಿಂದ ವಿಳಂಬ ಸೇರಿದಂತೆ ವಿವಿಧ ಕಾರಣಗಳಿಂದ ಕಡತಗಳು ಬಾಕಿ ಉಳಿದಿವೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎಲ್ಲ ಕಡತಗಳನ್ನು ತೆರವುಗೊಳಿಸಲಾಗುವುದು. ಕೆಲ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಮತ್ತು ಅರ್ಜಿದಾರರಿಗೆ ಆದಷ್ಟು ಬೇಗ ಸೇವೆಗಳನ್ನು ತಲುಪಿಸಲು ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಆರಂಭಿಸಿರುವ ಕಡತ ವಿಲೇವಾರಿ ಅಭಿಯಾನವನ್ನು ಶ್ಲಾಘಿಸಿದ ಕಂದಾಯ ಸಚಿವ ಆರ್ .ಆಶೋಕ್, ಕಳೆದ 15-20 ವರ್ಷಗಳಿಂದಲೂ ಕೆಲವೊಂದು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಕಡತ ವಿಲೇವಾರಿ ನಿಜವಾಗಿಯೂ ಜನರಿಗೆ ಸಹಾಯ ಮಾಡುವ ಅಭಿಯಾನ. ದಕ್ಷಿಣ ಕನ್ನಡದಲ್ಲಿ ಆರಂಭಿಸಲಾದ ಈ ಅಭಿಯಾನದ ಸೂಚನೆಯನ್ನು ತೆಗೆದುಕೊಂಡು, ಕಂದಾಯ ಇಲಾಖೆಯು ಶೀಘ್ರದಲ್ಲೇ ಈ ಮಾದರಿಯನ್ನು ಕರ್ನಾಟಕದಾದ್ಯಂತ ವಿಸ್ತರಿಸಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್, ವೈ.ಭರತ್ ಶೆಟ್ಟಿ, ಉಮಾನಾಥ್ ಎ.ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.