ಉಡುಪಿ, ಫೆ.15 : ವಿದ್ಯಾರ್ಥಿಗಳು ಹಿಜಾಬ್ ಧಾರಣೆ, ಮಾಡುವ ಸಂಬಂದ ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶವನ್ನು ಜಿಲ್ಲೆಯಲ್ಲಿ ಪಾಲನೆ ಮಾಡುವುದರೊಂದಿಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು ಬಾರದೇ ಇರುವ ರೀತಿಯಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮನವಿ ಮಾಡಿದರು.
ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೈಕೋರ್ಟ್ ಆದೇಶ ಪಾಲನೆ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ:
ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಪಾಲನೆ ಸಂಬಂದ ವಿವಾದವು ಈಗಾಗಲೇ ನ್ಯಾಯಾಲಯದ ಮುಂದೆ ಇದ್ದು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದ ಆದೇಶ ಬರಲಿದ್ದು, ಪ್ರಸ್ತುತ ನ್ಯಾಯಾಲಯವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಮಧ್ಯಂತರ ಆದೇಶವನ್ನು ನೀಡಿದ್ದು, ಇದನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ಸಂವಿಧಾನಾತ್ಮಕ ನ್ಯಾಯಾಲಯದಿಂದ ಹೊರಡಿಸಿರುವ ಮಧ್ಯಂತರ ಆದೇಶವನ್ನು ವಿದ್ಯಾರ್ಥಿಗಳು ಪಾಲನೆ ಮಾಡುವಂತೆ ಪೋಷಕರು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಧಾರ್ಮಿಕ ಮುಖಂಡರು, ರಾಜಕೀಯ ಪಕ್ಷದ ಮುಖಂಡರುಗಳು ಸೇರಿದಂತೆ ಸಾರ್ವಜನಿಕರು ಮನವೊಲಿಸಬೇಕು ಎಂದರು.
ಮಧ್ಯಂತರ ಆದೇಶದಲ್ಲಿ ನ್ಯಾಯಾಲಯವು ಶಾಲಾ ಕಾಲೇಜುಗಳಲ್ಲಿ ಶಾಲಾಭಿವೃದ್ಧಿ ಸಮಿತಿಗಳು ಸಮವಸ್ತ್ರ ಸಂಹಿತೆಯನ್ನು ಈ ಹಿಂದೆ ಜಾರಿ ತಂದಿದ್ದರೆ ಅದರ ಪಾಲನೆಯನ್ನು ಚಾಚೂ ತಪ್ಪದೇ ಮಾಡಬೇಕಾಗುತ್ತದೆ, ಕೆಲವೊಮ್ಮೆ ಈ ರೀತಿಯ ಸಮವಸ್ತ್ರ ಸಂಹಿತೆಗಳು ಇಲ್ಲದೆ ಇದ್ದ ಸಂದರ್ಭದಲ್ಲಿ ಈ ಹಿಂದಿನನಂತೆಯೇ ಯಥಾ ಪ್ರಕಾರವಾಗಿರುತ್ತದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು 144ರ ಆದೇಶ ಜಾರಿ:
ಶಾಲಾ ಕಾಲೇಜುಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಂಡ ಪ್ರಕ್ರಿಯ ಸಂಹಿತೆ 144 ರ ಆದೇಶವನ್ನು ಹೊರಡಿಸಲಾಗಿದೆ, ಶಾಲೆಯ ಪ್ರಾಚಾರ್ಯರು, ಮುಖ್ಯೋಪಧ್ಯಾಯರು ಸೇರಿದಂತೆ ಶಾಲೆಯ ಶಿಕ್ಷಕರುಗಳು ವಿದ್ಯಾರ್ಥಿಗಳ ಜೊತೆ ಸಮನ್ವಯದೊಂದಿಗೆ ಸಮಾಲೋಚನೆಗಳನ್ನು ನಡೆಸಿ, ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.
ಒಂದೊಮ್ಮೆ ವಿದ್ಯಾರ್ಥಿಗಳು ಶಾಲಾ ವಸ್ತ್ರ ಸಂಹಿತೆಯನ್ನು ಪಾಲನೆ ಮಾಡದೇ ಇರುವ ಬಗ್ಗೆ ವರ್ತಿಸಿದಲ್ಲಿ , ಶಿಕ್ಷಕರು ಅವರುಗಳ ಜೊತೆಯಲ್ಲಿ ಅನುಚಿತವಾಗಿ ವರ್ತಿಸದೇ, ಶಾಲೆಯ ಆವರಣದಲ್ಲಿ ಅವಕಾಶ ನೀಡಿ, ಶಾಲಾ ಬೋಧನಾ ಕೊಠಡಿಯಲ್ಲಿ ವಸ್ತ್ರ ಸಂಹಿತೆಯನ್ನು ಪಾಲನೆ ಮಾಡುವಂತೆ ಹೇಳುವುದರೊಂದಿಗೆ ಕಲಿಕಾ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳು ಮುಖ್ಯಸ್ಥರು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರುಗಳು ಮತ್ತಿತರರು ಜಿಲ್ಲೆಯ ಜನತೆ ಬಹಳ ಹಿಂದಿನಿಂದಲೂ ಅಣ್ಣ ತಮ್ಮಂದಿರಂತೆ ಸೌಹಾರ್ದಯುತವಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಸಾಮರಸ್ಯಕ್ಕೆ ಒತ್ತು ನೀಡಿದ್ದಾರೆ.
ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣಕ್ಕೆ ಹೆಸರನ್ನು ಹೊಂದಿದೆ ಇದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮಗಳ ಆದ್ಯ ಕರ್ತವ್ಯವಾಗಿದೆ, ನ್ಯಾಯಾಲಯದ ಆದೇಶವನ್ನು ಗೌರವಿಸುವುದು ನಮ್ಮೆಲ್ಲರುಗಳ ಜವಾಬ್ದಾರಿಯಾಗಿದೆ ಅದನ್ನು ಪಾಲನೆ ಮಾಡುವುದರೊಂದಿಗೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಂಡು ಅವರುಗಳ ಉತ್ತಮ ಭವಿಷ್ಯ ರೂಪಿಸುವುದು ಆದ್ಯತೆಯಾಗಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್ಪಿ ವಿಷ್ಣು ವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಎಎಸ್ಪಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.