ಸ್ವಚ್ಛತಾ ಕಾರ್ಯಕರ್ತರಿಂದ ಉಡುಪಿಗೆ ರಾಷ್ಟ್ರಮಟ್ಟದ ಗರಿಮೆ: ಡಾ.ನವೀನ್ ಭಟ್      

ಉಡುಪಿ, ಫೆ.10: ಉಡುಪಿ ಜಿಲ್ಲೆಯು ಸ್ವಚ್ಛತೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸ್ವಚ್ಛತಾ ಕಾರ್ಯಕರ್ತರ ಶ್ರಮದಿಂದ ಸಾಧ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು.

ಅವರು ಇಂದು ಉಡುಪಿ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ), ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಡೆದ, ಸ್ವಚ್ಛತಾ ಕಾರ್ಯಕರ್ತರ ಕ್ರೀಡಾಕೂಟ ಸ್ವಚ್ಛ ಸಂಭ್ರಮ 2022  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

ಸ್ವಚ್ಛತಾ ಕಾರ್ಯಕರ್ತರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಹಸಿ ಮತ್ತು ಒಣಕಸ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದು, ಇದರಿಂದಾಗಿ ಜಿಲ್ಲೆಯು ಸ್ವಚ್ಛತೆಯಲ್ಲಿ ರಾಷ್ಟದಲ್ಲೇ ಅತ್ಯುತ್ತಮ ಸಾಧನೆ ಮಾಡಿದೆ.

 

ಜಿಲ್ಲೆಯಲ್ಲಿನ ಎಸ್.ಎಲ್.ಆರ್.ಎಂ ಘಟಕಗಳು, ಎಂ.ಆರ್.ಎಫ್ ಘಟಕಗಳು, ಎಫ್.ಎಸ್.ಎಲ್ ಘಟಕ, ಬೂದು ನೀರು ನಿರ್ವಹಣೆಯಲ್ಲೂ ಸಹ ಜಿಲ್ಲೆ ಸಾಧನೆ ಮಾಡಲು ತಮ್ಮ ಕೊಡುಗೆ ನೀಡಿದ್ದಾರೆ ಎಂದರು.

 

ಸ್ವಚ್ಛತಾ ಕಾರ್ಯಕರ್ತರು ಇನ್ನೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಈ ಕ್ರೀಡಾಕೂಟದಿಂದ ಹೆಚ್ಚಿನ ಹುಮ್ಮಸ್ಸು ದೊರೆಯಲಿದ್ದು, ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಸ್ವಚ್ಛತಾ ಕಾರ್ಯಕರ್ತರಿಗೆ  ಉಡುಪಿ ಜಿಲ್ಲೆಯಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಪ್ರಧಾನ ಮಂತ್ರಿಗಳು ನೀಡಿದ ಸ್ವಚ್ಛ ಭಾರತ ನಿರ್ಮಾಣ ಕಲ್ಪನೆಯನ್ನು     ಸ್ವಚ್ಛತಾ ಕಾರ್ಯಕರ್ತರ ಮೂಲಕ ಜಿಲ್ಲೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರತೀ ಮನೆ ಮನೆಯಿಂದ ಕಸ ಸಂಗ್ರಹಿಸುವ ಮೂಲಕ ಸ್ವಚ್ಛತಾ ವಾತಾವರಣ ಮೂಡಿಸಲಾಗಿದೆ.

 

ಜಿಲ್ಲೆಯಲ್ಲಿನ ಎಸ್.ಎಲ್.ಆರ್.ಎಂ ಘಟಕಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜೊತೆಗೆ ಹಲವು ಮಂದಿಗೆ ಉದ್ಯೋಗ ನೀಡಿದೆ ಎಂದರು.

 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಚ್ಛತಾ ಕಾರ್ಮಿಕರಿಗೆ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ 18 ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಹಾಗೂ ಪ್ರತೀ ವರ್ಷವೂ ಈ ರೀತಿಯ ಕ್ರೀಡಾಕೂಟ ಏರ್ಪಡಿಸಲಾಗುವುದು ಎಂದರು.

 

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

 

ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ 250 ಕ್ಕೂ ಅಧಿಕ ಸ್ವಚ್ಛತಾ ಕಾರ್ಯಕರ್ತರು ಈ  ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

 

ಬಡಗಬೆಟ್ಟು ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ನೀರಜಾ ಸ್ವಾಗತಿಸಿದರು, ಮುಡಾರು ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ಮಾಧವಿ ವಂದಿಸಿದರು. ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್‌ನ ಜಿಲ್ಲಾ ಸಮಾಲೋಚಕ ರಘುನಾಥ್ ನಿರೂಪಿಸಿದರು.