ಪ್ರಸ್ತುತ ಸಾಲಿನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಅನುದಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಉಸ್ತುವಾರಿ ಸಚಿವ ಅಂಗಾರ ಸೂಚನೆ

ಉಡುಪಿ: ಸರ್ಕಾರ ಪ್ರಸುತ್ತ ಸಾಲಿಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಯೋಜನೆಗಳಿಗೆ ಮಂಜೂರು ಮಾಡಿರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರೊಂದಿಗೆ ಪ್ರತಿಶತ 100 ರಷ್ಟು ಪರಿಣಾಮಕಾರಿಯಾಗಿ ಮಾರ್ಚ್ ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಬುಧವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಅದಕ್ಕನುಗುಣವಾಗಿ ಅನುದಾನವನ್ನೂ ಸಹ ನೀಡಿದೆ. ಇವುಗಳ ಪರಿಣಾಮಕಾರಿ ಅನುಷ್ಠಾನವನ್ನು ಮಾಡುವುದರೊಂದಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದರು.

ಸರ್ಕಾರದ ಯೋಜನೆಗಳನ್ನು ಕಾರ್ಯ ಸಾಧನೆ ಮಾಡುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಜಿಲ್ಲಾಡಳಿತ ಅಥವಾ ನಮ್ಮ ಗಮನಕ್ಕೆ ತಂದು ಅದನ್ನು ಶೀಘ್ರದಲ್ಲಿಯೇ ಪರಿಹರಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.

ಸಮಗ್ರ ಗಿರಿಜನ ಯೋಜನೆಯಡಿಯಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ನೀಡಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವುದರೊಂದಿಗೆ ವ್ಯವಸ್ಥಿತವಾದ ಭವನ ನಿರ್ಮಾಣ ಮಾಡಬೇಕು ಅವುಗಳ ನಿರ್ಮಾಣವು, ಸ್ಥಳೀಯ ಜನರ ಸದ್ಬಳಕೆಗೆ ಅನುಕೂಲಕರವಾಗುವ ಸ್ಥಳಗಳಲ್ಲಿ ನಿರ್ಮಿಸಬೇಕೆಂದು ಸೂಚನೆ ನೀಡಿದರು.

ಅಂಬೇಡ್ಕರ್ ಅಭಿವೃದ್ದಿ ನಿಗಮ ಸೇರಿದಂತೆ ವಿವಿಧ ಅಭಿವೃದ್ದಿ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕಾಮಗಾರಿಗಳನ್ನು ಕೈಗೊಳ್ಳುವ ಕಾರ್ಯ ವಿಳಂಬವಾಗಿದೆ. ಕೊಳವೆ ಬಾವಿ ಕೊರೆಯುವ ಟೆಂಡರ್ ಕಾಮಗಾರಿಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಕರೆಯುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಸರ್ಕಾರದ ಸಹಾಯಧನದೊಂದಿಗೆ ನಿರುದ್ಯೋಗಿಗಳಿಗೆ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಫಲಾನುಭವಿಗಳನ್ನು ಅಯ್ಕೆ ಮಾಡಿ, ಅರ್ಥಿಕ ನೆರವನ್ನು ಒದಗಿಸಲು ಬ್ಯಾಂಕ್ ಗಳಿಗೆ ಶಿಫಾರಸ್ಸು ಅರ್ಜಿಗಳನ್ನು ವಿಳಂಬವಿಲ್ಲದೇ ನೆರವನ್ನು ಒದಗಿಸಬೇಕೆಂದು ಲೀಡ್ ಬ್ಯಾಂಕ್ ಮೆನೇಜರ್ ಗೆ ಸೂಚನೆ ನೀಡಿದರು.

ಅಭಿವೃಧ್ದಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಉತ್ತರಿಸುವಾಗ ವಾಸ್ತವ ಅಂಶದ ಮಾಹಿತಿಗಳನ್ನು ನೀಡಬೇಕು, ಹಾರಿಕೆ ಉತ್ತರಗಳನ್ನು ನೀಡಿ ಸಮಸ್ಯೆಗೆ ಒಳಗಾಗಬೇಡಿ ಎಂದ ಅವರು, ಕೆಲಸ ಕಾರ್ಯಗಳನ್ನು ನಿಗಧಿತ ಕಾಲಮಿತಿಯೊಳಗೆ ಮಾಡಬೇಕೆಂದು ತಿಳಿಸಿದರು.

ಸಾರ್ವಜನಿಕರಿಂದ ಕೈಗಾರಿಕೆ ಸೇರಿದಂತೆ ಮತ್ತಿತರ ಕಾರ್ಯಗಳಿಗೆ ಭೂ ಸ್ವಾಧೀನ ಪಡಿಸಿಕೊಂಡು ನಿಗಧಿತ ಉದ್ದೇಶದ ಬಳಕೆಗೆ ಜಮೀನನ್ನು ನೀಡಿದಾಗ, ಆ ಜಮೀನು ಸದ್ಬಳಕೆ ಯಾಗದೇ ಇದ್ದಾಗ ಅದನ್ನು ಮರು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಿದರು.

ನಗರೋತ್ಥಾನದ 4 ನೇ ಹಂತದಲ್ಲಿ ಪ್ರತಿ ನಗರಸಭೆಗೆ 40 ಕೋಟಿ, ಪುರಸಭೆಗಳಿಗೆ 10 ಕೋಟಿ ಹಾಗೂ ಪಟ್ಟಣ ಪಂಚಾಯತ್ ಗಳಿಗೆ ತಲಾ 5 ಕೋಟಿ ಅನುದಾನವನ್ನು ನೀಡಲಾಗಿದ್ದು, ನಗರ ಪ್ರದೇಶಗಳ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆಗಳನ್ನು ರೂಪಿಸಿ ಶೀಘ್ರದಲ್ಲಿಯೇ ಅನುಮೋದನೆ ಪಡೆದು ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ವಾರಾಹಿ ನೀರಾವರಿ ಯೋಜನೆಯಡಿ ಕುಡಿಯುವ ನೀರು ಸೇರಿದಂತೆ ನೀರಾವರಿ ಯೋಜನೆಗಳನ್ನು ರೂಪಿಸಲು 70 ರ ದಶಕದಲ್ಲಿ 9 ಕೋಟಿ ಅಂದಾಜು ಮೊತ್ತದಲ್ಲಿ ಯೋಜನೆ ರೂಪಿಸಲಾಗಿತ್ತು, ಈ ಕಾಮಗಾರಿ ಕುಂಠಿತವಾಗಿ ಕೈಗೊಂಡ ಹಿನ್ನಲೆ ಪ್ರಸ್ತುತ 553 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡರೂ ಶೇ.50 ರಷ್ಟು ಪ್ರಗತಿ ಸಾಧಿಸಲಾಗಿದೆ, ಬಾಕಿ ಉಳಿದ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ವಿಧಾನಪರಿಷತ್ ಶಾಸಕ ಆಯನೂರು ಮಂಜುನಾಥ್, ಕಾಫು ಶಾಸಕ ಲಾಲಾಜಿ ಮೆಂಡನ್, ಶಾಸಕ ರಘುಪತಿ ಭಟ್, ವಿಧಾನ ಪರಿಷತ್ ನ ಶಾಸಕ ಮಂಜುನಾಥ ಭಂಢಾರಿ ಮಾತನಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಜಿಲ್ಲಾ ಪಂಛಾಯತ್ ಸಿಇಓ ಡಾ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.