ಉಡುಪಿ: ಎಂಜಿಎಂ ಕಾಲೇಜಿನ ಆವರಣದಲ್ಲಿ ಮಂಗಳವಾರ ಕೇಸರಿ ಪೇಟ, ಶಾಲಿನ ಆರ್ಭಟ ಜೋರಾಗಿತ್ತು. ಹಿಜಾಬ್ ಗೆ ಟಕ್ಕರ್ ಕೊಡಲು ನೂರಾರು ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಬಂದಿದ್ದು, ಕಾಲೇಜ್ ಕ್ಯಾಂಪಸ್ ಕೇಸರಿ ಮಯವಾಗಿತ್ತು.
ಕೇಸರಿ ಪೇಟ, ಶಾಲಿನೊಂದಿಗೆ ದಿಢೀರ್ ಆಗಿ ಕಾಲೇಜ್ ಕ್ಯಾಂಪಸ್ ಬಂದ ವಿದ್ಯಾರ್ಥಿಗಳನ್ನು ಕಂಡು ಕಾಲೇಜು ಆಡಳಿತ ಮಂಡಳಿ ಕಂಗಾಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಆಡಳಿತ ಮಂಡಳಿ ಹರಸಾಹಸ ಪಟ್ಟಿತು. ಆದರೆ, ಆಡಳಿತ ಮಂಡಳಿಯ ಸೂಚನೆಗೆ ಬಗ್ಗದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಮೊಳಗಿಸಿ ಕೇಸರಿ ಶಾಲು ಬೀಸುತ್ತಾ ಪ್ರತಿಭಟನೆಗೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ಸೂಚನೆ ಅರಿತ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಗೇಟಿನಿಂದ ಹೊರಗೆ ಕಳುಹಿಸಿ, ಕಾಲೇಜಿಗೆ ರಜೆ ಘೋಷಿಸಿತು. ಕಾಲೇಜಿನ ಆವರಣದಿಂದ ಹೊರಬಂದ ವಿದ್ಯಾರ್ಥಿಗಳು ಗೇಟಿನ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ಮುಂದುವರಿಸಿದರು.