ಉಡುಪಿ ಎಂಜಿಎಂ ಕಾಲೇಜಿನಲ್ಲಿ ತಾರಕಕ್ಕೇರಿದ ಕೇಸರಿ ಪೇಟ- ಹಿಜಾಬ್ ವಿವಾದ; ತರಗತಿ ಪ್ರವೇಶಕ್ಕೆ ಅನುಮತಿ ನೀಡುವಂತೆ ವಿದ್ಯಾರ್ಥಿಗಳ ಬೀಗಿಪಟ್ಟು

ಉಡುಪಿ: ಜಿಲ್ಲೆಯಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಸದ್ಯಕ್ಕೆ ತಣ್ಣಾಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ಉಡುಪಿ ಎಂಜಿಎಂ ಕಾಲೇಜಿನಲ್ಲೂ ಹಿಜಾಬ್ ವಿವಾದ ಭುಗಿಲೆದಿದ್ದು, ಮಂಗಳವಾರ ಕೇಸರಿ ಶಾಲು ಪೇಟದೊಂದಿಗೆ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ತರಗತಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.ಇನ್ನೊಂದು ಕಡೆ ಹಿಜಾಬ್ ಹಾಕಿಕೊಂಡ ಬಂದ ವಿದ್ಯಾರ್ಥಿನಿಯರು ತರಗತಿ ಪ್ರವೇಶಕ್ಕೆ ಅನುಮತಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.

ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿಕೊಂಡ ಬಂದ ವಿದ್ಯಾರ್ಥಿ ಗುಂಪುಗಳ ಬೀಗಿ ಪಟ್ಟುವಿನಿಂದ ಕಾಲೇಜು ಆಡಳಿತ ಮಂಡಳಿ ಇಕ್ಕಟ್ಟಿಗೆ ಸಿಲುಕಿದ್ದು, ತರಗತಿ ನಡೆಸಬೇಕೋ ಬೇಡವೋ ಎಂಬ ಗೊಂದಲದಲ್ಲಿದೆ‌.

ಕೇಸರಿ ಶಾಲು, ಹಿಜಾಬ್ ನೊಂದಿಗೆ ತರಗತಿಗೆ ಪ್ರವೇಶ ನೀಡುವುದಿಲ್ಲ. ಅದನ್ನು ತೆಗೆದು ಬನ್ನಿ‌ ಎಂದು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಮನವೊಲಿಸಿದರೂ ವಿದ್ಯಾರ್ಥಿಗಳು ತಮ್ಮ ಬೀಗಿಪಟ್ಟು ಸಡಿಲಿಸುತ್ತಿಲ್ಲ.

ಇದರಿಂದ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಅಗತ್ಯ ಭದ್ರತೆ ಕೈಗೊಂಡಿದ್ದಾರೆ. ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು ತರಗತಿ ಹಾಜರಾಗದೆ ಕ್ಯಾಂಪಸ್ ನಲ್ಲಿ ನಿಂತಿದ್ದಾರೆ. ತರಗತಿ ಪ್ರವೇಶಕ್ಕೆ ಅನುಮತಿ ನೀಡುವಂತೆ ಪ್ರತಿಭಟಿಸುತ್ತಿದ್ದಾರೆ.