ಹಿಜಾಬ್ ವಿವಾದಕ್ಕೆ ಇತಿಶ್ರೀ, ಸರ್ಕಾರದಿಂದ ಒಳ್ಳೆಯ ನಿರ್ಧಾರ: ಶಾಸಕ ರಘುಪತಿ ಭಟ್

ಉಡುಪಿ: ಶಾಲಾ, ಕಾಲೇಜುಗಳ ಸಮವಸ್ತ್ರದ ಕುರಿತಂತೆ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಆ ಮೂಲಕ ಹಿಜಾಬ್ ಧರಿಸುವ ಹಾಗೂ ಸಮವಸ್ತ್ರ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ಇತಿಶ್ರೀ ಹಾಡಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಜಾರಿಗೊಳಿಸಿರುವ ಆದೇಶದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅವರ ಸಮಿತಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸಮವಸ್ತ್ರ ನಿರ್ಧಾರ ಮಾಡಬಹುದು. ಒಂದು ಪಕ್ಷ ನಿರ್ಧಾರ ಆಗದಿದ್ದರೂ, ಧಾರ್ಮಿಕ ಭಾವನೆ ಕೆಡಿಸುವ ಯಾವುದೇ ವಸ್ತ್ರಧಾರಣೆ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಿದ್ದಾರೆ ಎಂದರು.

ಸರ್ಕಾರದ ಆದೇಶದಿಂದ ಇನ್ಮುಂದೆ ಕೇಸರಿ ಶಾಲು ಹಾಕುವವರಿಗೂ ಅವಕಾಶ ಇಲ್ಲ, ಹಿಜಾಬ್ ಹಾಕುವವರಿಗೂ ಅವಕಾಶ ಇಲ್ಲ. ಶಿಕ್ಷಣ ಸಂಸ್ಥೆ ಯಾವ ವಸ್ತ್ರಸಂಹಿತೆ ಮಾಡುತ್ತಾರೋ ಅದನ್ನು ಧರಿಸಿಕೊಂಡು ಕಾಲೇಜಿಗೆ ಬರಬೇಕು. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಇದೊಂದು ಉತ್ತಮ ಆದೇಶ ಎಂದು ಹೇಳಿದರು.
ಈ ವೇಳೆ ಮುಖ್ಯಮಂತ್ರಿ‌ ಹಾಗೂ ಶಿಕ್ಷಣ ಸಚಿವರಿಗೆ ಅವರು ಅಭಿನಂದನೆ ಸಲ್ಲಿಸಿದರು.