ರಾಜ್ಯದ ಶಾಲೆಗಳಲ್ಲಿ ಒಂದೇ ನಿಯಮ ಇರಬೇಕು. ಶಾಲೆಗೊಂದು ನಿಯಮ ಮಾಡಲು ಸಾಧ್ಯವಿಲ್ಲ. ಒಂದೊಂದು ಶಾಲೆಯಲ್ಲಿ ಬೇರೆ ಬೇರೆಯಾದ ನಿಯಮ ಅನುಸರಿಸಿದರೆ, ಅದರ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.
ಉಡುಪಿ ಬಾಲಕಿಯರ ಕಾಲೇಜಿನ ಸ್ಕಾರ್ಫ್ ವಿವಾದ ಹಾಗೂ ಅದರ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಬಾಲಕಿಯರ ಕಾಲೇಜಿನ ಸ್ಕಾರ್ಫ್ ವಿವಾದದ ಕುರಿತಂತೆ ಸರ್ಕಾರ ಈಗಾಗಲೇ ಸಮಿತಿ ರಚಿಸಿದ್ದು, ಆ ಸಮಿತಿ ತನಿಖೆ ನಡೆಸಿ ನೀಡುವ ವರದಿ ಹಾಗೂ ಜಿಲ್ಲಾಡಳಿತ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಯಾವ ಕ್ರಮಕೈಗೊಳ್ಳಬೇಕೆಂಬುವುದನ್ನು ತೀರ್ಮಾನಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಈ ರೀತಿಯ ಅನಗತ್ಯ ವಿವಾದ ಮಾಡುವುದು ಸರಿಯಲ್ಲ. ಇದನ್ನು ಶಾಲಾ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.












