ಮಲ್ಪೆ: ಪರಿಚಯಸ್ಥರಿಗೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕೊಟ್ಟು ಮೋಸ ಹೋದ ಮಹಿಳೆ

ಮಲ್ಪೆ: ಪರಿಚಯಸ್ಥರಿಗೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕೊಟ್ಟು ಮಹಿಳೆಯೊಬ್ಬರು ಮೋಸ ಹೋದ ಘಟನೆ ಪಡುತೋತ್ಸೆ ಗ್ರಾಮದ ಗುಜ್ಜರಬೆಟ್ಟು ಎಂಬಲ್ಲಿ ನಡೆದಿದೆ‌.

ಗುಜ್ಜರಬೆಟ್ಟು ನಿವಾಸಿ ಪ್ರಮೀಳಾ ಮೆಂಡನ್ ವಂಚನೆಗೊಳಗಾದ ಮಹಿಳೆ. ಇವರಿಗೆ ಪರಿಚಯದವರಾದ ನೆರೆಮನೆಯ ನಿವಾಸಿ ಶಶಾಂಕ ಮತ್ತು ಆತನ ಗೆಳೆಯ ಕೌಶಿಕ್ ಎಂಬವರು ವಂಚನೆ ಎಸಗಿದ್ದಾರೆ.

ಆರೋಪಿಗಳಿಬ್ಬರು ಪಿರ್ಯಾದಿದಾರರ ಮನೆಗೆ ಆಗಾಗ ಬಂದು ಹೋಗುತ್ತಿದ್ದು, ವಿಶ್ವಾಸದಿಂದ ಮಾತನಾಡಿ ಸಲುಗೆ ಬೆಳೆಸಿಕೊಂಡಿದ್ದರು. 2021ರ ಜನವರಿ‌ ತಿಂಗಳಲ್ಲಿ ಮನೆಗೆ ಬಂದ ಇಬ್ಬರು, ನಮಗೆ ತೀವ್ರ ಆರ್ಥಿಕ ಮುಗ್ಗಟ್ಟಿದ್ದು , ಹಣದ ಅವಶ್ಯಕತೆ ಇದೆ ಎಂದು ಪ್ರಮೀಳಾ ಅವರನ್ನು ನಂಬಿಸಿ ಗಂಡನ 2 ಪಾವನ್ ತೂಕದ ಚಿನ್ನದ ಬ್ರಾಸ್ ಲೈಟ್ ಹಾಗೂ ಫೆಬ್ರವರಿ ತಿಂಗಳಲ್ಲಿ ಒಂದು ಬಾರಿ ಸುಮಾರು 2 ಪಾವನ್ ತೂಕದ ಚೈನ್ ಮತ್ತು ಇನ್ನೊಂದು ಬಾರಿ 3 ಪಾವನ್ ತೂಕದ ಹವಳದ ಸರ ಮತ್ತು ಮಾರ್ಚ್ ತಿಂಗಳಲ್ಲಿ 1 ½ ಪಾವನ್ ತೂಕದ ನೆಕ್ಲೆಸ್ ಮತ್ತು ಜೂನ್ ತಿಂಗಳಲ್ಲಿ 4 ಪಾವನ್ ತೂಕದ ಕರಿಮಣಿ ಸರವನ್ನು ತೆಗೆದುಕೊಂಡು ಹೋಗಿದ್ದರು.

ಬಳಿಕ ಪ್ರಮೀಳಾ ಅನೇಕ ಬಾರಿ ಆಭರಣಗಳನ್ನು ವಾಪಾಸ್ಸು ಕೊಡುವಂತೆ ಕೇಳಿದ್ದಾರೆ. ಆದರೆ ಆರೋಪಿಗಳು ಕೊಟ್ಟಿರುವುದಿಲ್ಲ. ಆರೋಪಿಗಳು ನಂಬಿಸಿ ಸುಮಾರು 12 ½ ಪಾವನ್ ತೂಕದ ಚಿನ್ನದ ಆಭರಣಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಪ್ರಮೀಳಾ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.