ಉಡುಪಿ: ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಲ್ಲಿ 1400 ಕಿಂಡಿ ಅಣೆಕಟ್ಟುಗಳನ್ನು ಗುರುತಿಸಲು ಸ್ಥಳಗಳನ್ನು ಗುರುತಿಸಲಾಗಿದ್ದು, ಈ ವರ್ಷ ಇದಕ್ಕಾಗಿ 500 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.
ಅವರು ಇಂದು ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 560 ಲಕ್ಷ ರೂ. ವೆಚ್ಚದಲ್ಲಿ 4 ಕಿಂಡಿ ಅಣೆಕಟ್ಟುಗಳನ್ನು ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಲ್ಲಿ ಹರಿದು ಸಮುದ್ರ ಸೇರುವ ನೀರನ್ನು ತಡೆದು ಕೃಷಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಅನುಕೂಲವಾಗುವಂತೆ ಪಶ್ಚಿಮ ವಾಹಿನಿ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದ್ದು, 1400 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಅಂರ್ತಜಲ ವೃದ್ಧಿಯ ಜೊತೆಗೆ, ಮಣ್ಣಿನ ಫಲವತ್ತತೆ ವೃಧ್ದಿ ಸಹ ಸಾಧ್ಯವಾಗಲಿದೆ ಎಂದು ಸಚಿವರು, ರಾಜ್ಯದಲ್ಲಿ ನೀರು ಹರಿಯುವ ಹಳ್ಳಗಳಲ್ಲಿ ಶೇಖರಣೆಯಾಗುವ ಹೂಳು ತೆಗೆಯಲೂ ಸಹ ಯೋಜನೆ ರೂಪಿಸಲಾಗುವುದು ಹೇಳಿದರು.
ಈ ಭಾಗದ ಡ್ರೀಮ್ಡ್ ಅರಣ್ಯ ಸಮಸ್ಯೆಗೆ ಸಂಬಂದಿಸಿದಂತೆ ಈಗಾಗಲೇ ರಾಜ್ಯದಲ್ಲಿ 7.70 ಲಕ್ಷ ಹೆಕ್ಟೇರ್ ಭೂಮಿಯನ್ನು ಡ್ರೀಮ್ಡ್ ವ್ಯಾಪ್ತಿಯಿಂದ ಕೈ ಬಿಡುವಂತೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಾಗಿದೆ. ಈ ಭೂಮಿಯನ್ನು ಅರ್ಹ ಭೂ ರಹಿತರಿಗೆ ನೀಡಲಾಗುವುದು ಎಂದ ಸಚಿವರು, ಈಗಾಗಲೇ ಅರಣ್ಯ ವ್ಯಾಪ್ತಿಯಲ್ಲಿನ ಸಣ್ಣ ಹಿಡುವಳಿದಾರರು ಮತ್ತು ಮನೆ ಕಟ್ಟಿಕೊಂಡಿರುವವರು ಎದುರಿಸುತ್ತಿರುವ ಡ್ರೀಮ್ಡ್ ಅರಣ್ಯದ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಈ ಭಾಗದಲ್ಲಿ ಅಂರ್ತಜಲ ವೃಧ್ದಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದ್ದು, 2018 ರಿಂದ 2023 ರ ಅವಧಿಯೊಳಗೆ 100 ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆಯಿದೆ ಎಂದ ಅವರು, ಡ್ರೀಮ್ಡ್ ಫಾರೆಸ್ಟ್ ನಿಂದ ಈ ಭಾಗದಲ್ಲಿ ಅಭಿವೃದ್ದಿ ಕುಂಠಿತವಾಗಿದ್ದು, ಪ್ರಸ್ತುತ ಸರಕಾರ ಡ್ರೀಮ್ಡ್ ಫಾರೆಸ್ಟ್ ನಿಂದ ಭೂಮಿಯನ್ನು ಕೈಬಿಡುವ ಕುರಿತಂತೆ ಸುಪ್ರೀಂಕೋಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಈ ಬಗ್ಗೆ ಶೀಘ್ರದಲ್ಲಿ ಸರ್ಕಾರದ ಸುತ್ತೋಲೆ ಆಗಲಿದೆ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.
ಶಿವಪುರ ಗ್ರಾಮದ ದೇವಸ್ಥಾನಬೆಟ್ಟು ನಲ್ಲಿ 150 ಲಕ್ಷ ರೂ, ಪುತ್ತಿಬೆಟ್ಟು ನಲ್ಲಿ 150 ಲಕ್ಷ ರೂ, ಮುಕ್ಕಾಣಿ ಗೋನುಮಾರು ನಲ್ಲಿ 155 ಲಕ್ಷ ರೂ, ಕುಂಟೆಬೆಟ್ಟು ನಲ್ಲಿ 105 ಲಕ್ಷ ರೂ ಸೇರಿದಂತೆ ಒಟ್ಟು 560 ಲಕ್ಷ ರೂ. ಗಳ ಕಿಂಡಿ ಆಣೆಕಟ್ಟು ಕಾಮಗಾರಿಗಳನ್ನು ಸಚಿವ ಮಾಧುಸ್ವಾಮಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ, ವರಂಗ ಗ್ರಾ.ಪಂ.ಅಧ್ಯಕ್ಷೆ ಉಷಾ ಹೆಬ್ಬಾರ್, ಸಣ್ಣ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಮೆಸ್ಕಾಂ ನ ನಿರ್ದೇಶಕ ದಿನೇಶ್ ಪೈ ಮತ್ತಿತರರು ಉಪಸ್ಥಿತರಿದ್ದರು.