ಉಡುಪಿ: ನರ್ಮ್ ಬಸ್ ದರ ಏರಿಕೆ ವಿರೋಧಿಸಿ ಸಿಐಟಿಯು ಪ್ರತಿಭಟನೆ

ಉಡುಪಿ: ಖಾಸಗಿ ಬಸ್ ಮಾಲೀಕರ ಒತ್ತಡಕ್ಕೆ ಮಣಿದು ಸರಕಾರಿ ನರ್ಮ್ ಬಸ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ಎಲ್ಲಾ ರೂಟ್ ಗಳಲ್ಲಿ ಬಸ್ ಓಡಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಉಡುಪಿ ತಾಲೂಕಿನ ಸಮಿತಿ ನೇತೃತ್ವದಲ್ಲಿ ಶನಿವಾರ ಉಡುಪಿ ನರ್ಮ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಖಾಸಗಿ ಬಸ್ ಮಾಲೀಕರ ಒತ್ತಡಕ್ಕೆ ಮಣಿದು ನರ್ಮ್ ಬಸ್ ಗಳ ದರ ಹೆಚ್ಚಳ ಮಾಡಲಾಗಿದೆ. ಇದು ಖಂಡನೀಯ. ಕೂಡಲೇ ನರ್ಮ್ ಬಸ್ ದರವನ್ನು ಇಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಉಡುಪಿ ಗ್ರಾಮಾಂತರ ಪ್ರದೇಶದ ಎಲ್ಲಾ ರೂಟ್ ಗಳಿಗೆ ಬಸ್ ಬಿಡಬೇಕು. ಎಲ್ಲಾ ಬಸ್ ನಿಲ್ದಾಣಗಳಲ್ಲಿ ವೇಳಾಪಟ್ಟಿ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಒಟ್ಟು ಸೇರಿಸಿ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಶಶಿಧರ್ ಗೊಲ್ಲ, ಸಿಐಟಿಯು ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್, ಉಮೇಶ್ ಕುಂದರ್, ನಳಿನಿ, ಸಂಜೀವ ಬಳ್ಕೂರು, ವಿದ್ಯಾರಾಜ್, ಸದಾಶಿವ ಬ್ರಹ್ಮಾವರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.