ಉಡುಪಿ:ಶಿರೂರು ಮಠಕ್ಕೆ ಯೋಗ್ಯ ಶಿಷ್ಯನನ್ನು ನೋಡಿ ಇಟ್ಟಿದ್ದೇವೆ. ಆತನಿಗೆ ಸಂನ್ಯಾಸ ಸ್ವೀಕರಿಸುವ ಎಲ್ಲ ಅರ್ಹತೆಗಳಿವೆ. ಆದರೂ ಈಗಲೇ ಎಲ್ಲವನ್ನೂ ತೀರ್ಮಾನಿಸಲು
ಆಗಲ್ಲ. ಈಗಲೇ ಆತನ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು.
ಉಡುಪಿ ಶಿರೂರು ಮಠದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿಷ್ಯನಾಗಲು ಅರ್ಹತೆಯುಳ್ಳವನು ಈಗಾಗಲೇ ಸೋದೆ ಮಠದ
ಗುರುಕುಲದಲ್ಲಿ ಅಧ್ಯಯನ ಮಾಡುತ್ತಿದ್ದು, ಮೂರು ವರ್ಷ ಕಾಲ ಆತನ ಚಟುವಟಿಕೆಗಳನ್ನು ಗಮನಿಸುತ್ತೇವೆ. ಸಂನ್ಯಾಸ ಸ್ವೀಕರಿಸಲು ಯೋಗ್ಯರೆಂದು ಮನಗಂಡ ಮೇಲೆ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದರು.
ಧರ್ಮ ಪ್ರಚಾರ ಮುಖ್ಯ:
ಇದು ನಾವು ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾದ ವಿಷಯವಾಗಿದೆ. ನಮಗೆ ಮಠದ ನಿರ್ವಹಣೆ ಮಾಡುವುದರ ಜತೆಗೆ ಧರ್ಮಪ್ರಚಾರ ಮಾಡುವ ಶಿಷ್ಯ ಬೇಕೇ ಹೊರತು, ಕೋರ್ಟ್, ಕಚೇರಿಗಳೆಂದು ಅಲೆಯಬಾರದು ಎಂಬ ಏಕೈಕ ಉದ್ದೇಶದಿಂದ ಉತ್ತರಾಧಿಕಾರಿ ನೇಮಕವನ್ನು ತುಸು ವಿಳಂಬ ಮಾಡಲಾಗುತ್ತಿದೆ. ಉತ್ತರಾಧಿಕಾರಿ ಸ್ಥಾನವನ್ನು ಪೂರ್ವಶ್ರಮದವರಿಗೆ, ಮೂಲ ಮಠಕ್ಕೆ ನೀಡುತ್ತಾರೆ ಎಂಬ ವದಂತಿಗಳಿವೆ ಇದರಿಂದ ನನಗೆ ತೀರಾ ನೋವಾಗಿದೆ ಎಂದರು.
ಮಠ ಚಿಂತನೆಯಲ್ಲಿ ಹೊಸತಾಗಬೇಕು:
ಕನಕ ಮಹಲ್ ವಿವಾದ ಇತ್ಯರ್ಥ ಬಗೆಹರಿಯಬೇಕೆನ್ನುವರಷ್ಟರಲ್ಲಿಯೇ, ಲಕ್ಷ್ಮೀವರತೀರ್ಥರ ಬ್ಯಾಂಕ್ ಖಾತೆಯಲ್ಲಿ ಕೋಟಿಗಟ್ಟಲೇ ಹಣ ವರ್ಗಾವಣೆ ಆಗಿದೆ ಎಂಬ ಕಾರಣಕ್ಕಾಗಿ ಆದಾಯ ತೆರಿಗೆ ಇಲಾಖೆ ದ್ವಂದ್ವ ಸೋದೆ ಮಠಕ್ಕೆ 17.34 ಕೋಟಿ ದಂಡ ಹಾಕಿದೆ. ಶಿರೂರು ಮೂಲ ಮಠ ಬೀಳುವ ಪರಿಸ್ಥಿತಿಯಲ್ಲಿತ್ತು. ಅದಕ್ಕೆ 25 ಲಕ್ಷ ಖರ್ಚು ಜೀರ್ಣೋದ್ಧಾರ ಮಾಡಿದ್ದೇವೆ.
ಮಠದ ಆದಾಯ ಮೂಲ ಕಡಿಮೆ ಇದೆ. ಬ್ಯಾಂಕ್ನಲ್ಲಿ ಮಠದ ಖಾತೆಯಲ್ಲಿ 10 ಲಕ್ಷ ರೂಪಾಯಿ ಮಾತ್ರ ಠೇವಣಿ ಇತ್ತು. ಆದರೆ ಅದನ್ನು ಕರ್ಪೋರೇಶನ್ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ. ಸದ್ಯ ಮಠದಲ್ಲಿ ಆರ್ಥಿಕ ಸಂಪತ್ತು ಎನ್ನುವುದು ಯಾವುದೂ ಇಲ್ಲ ಎಂದವರು ಹೇಳಿದರು. ಮಠ ಈ ಹಿಂದೆ ಇದ್ದಂತೆ ಆಗಬಾರದು ಹೊಸತಾಗಿ ಸಮಾಜಕ್ಕೆ ತೆರೆದುಕೊಳ್ಳಬೇಕು ಎಂದವರು ಹೇಳಿದರು.