ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತವಾಗಿ ಹಸ್ತಾಂತರ: 69 ವರ್ಷದ ಬಳಿಕ ಮತ್ತೆ ಟಾಟಾ ಮಡಿಲಿಗೆ ಏರ್ ಇಂಡಿಯಾ.!

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಹಸ್ತಾಂತರಿಸಲಾಗಿದೆ. 69 ವರ್ಷಗಳ ಬಳಿಕ ಪುನಃ ಟಾಟಾ ಮಡಿಲಿಗೆ ಏರ್ ಇಂಡಿಯಾ ಬಂದಿದೆ.

ಟಾಟಾ ಗ್ರೂಪ್ ಕಂಪನಿಯ ಎನ್ ಚಂದ್ರಶೇಖರನ್ ಗುರುವಾರ ಕಂಪನಿ ಅಧಿಕೃತವಾಗಿ ಟಾಟಾ ಗ್ರೂಪ್ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಿದರು.

ಕಳೆದ ವರ್ಷ ಸರ್ಕಾರ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ನ ಹಿಡುವಳಿ ಕಂಪನಿಯ ಅಂಗಸಂಸ್ಥೆಯಾದ ಟಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ 18,000 ಕೋಟಿ ರೂಪಾಯಿಗಳಿಗೆ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಮಾರಾಟ ಮಾಡಿತ್ತು.

ಮಾರಾಟವನ್ನು ಘೋಷಿಸಿದ ಮೂರು ದಿನಗಳ ನಂತರ, ಟಾಟಾ ಗ್ರೂಪ್‌ಗೆ ಲೆಟರ್ ಆಫ್ ಇಂಟೆಂಟ್ ಅನ್ನು ನೀಡಲಾಯಿತು. ಇದು ಏರ್‌ಲೈನ್‌ನಲ್ಲಿ ತನ್ನ 100 ಪ್ರತಿಶತ ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಿತು. ಅಕ್ಟೋಬರ್ 25ರಂದು ಕೇಂದ್ರವು ಈ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು.

ಸಾಲದ ಜವಾಬ್ದಾರಿಯನ್ನು ಹೊತ್ತುಕೊಂಡ ಟಾಟಾ:

ಟಾಟಾ ಸಂಸ್ಥೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಕೇಂದ್ರ ಸರ್ಕಾರ, ಏರ್ ಇಂಡಿಯಾದ ಶೇಕಡಾ 100ರಷ್ಟು ಪಾಲನ್ನು ಟಾಟಾ ಸನ್ಸ್ ಸಂಸ್ಥೆಗೆ ಮಾರಾಟ ಮಾಡಿದ್ದು, ಏರ್ ಇಂಡಿಯಾ ಮೇಲಿನ ಸಾಲದ ಪೈಕಿ 15,300 ಕೋಟಿ ರೂಪಾಯಿ ಸಾಲದ ಜವಾಬ್ದಾರಿಯನ್ನು ಟಾಟಾ ಗ್ರೂಪ್ ಹೊತ್ತುಕೊಳ್ಳುತ್ತದೆ.

ಇದರ ಹೊರತಾಗಿ ಬಾಕಿ ಇರುವ 46,262 ಕೋಟಿ ರೂಪಾಯಿ ಸಾಲದ ಜವಾಬ್ದಾರಿ ಸರ್ಕಾರದ ಮೇಲೆ ಇರಲಿದೆ.