ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಸಂಭ್ರಮ

ಮಂಗಳೂರು: ಮಂಗಳೂರಿನಂತಹ ತೆಂಕು ತಿಟ್ಟಿನ ಯಕ್ಷ ಕ್ಷೇತ್ರದಲ್ಲಿ ಬಡಗಿನ ಯಕ್ಷಗಾನ ಅಭ್ಯಾಸಕ್ಕೆ ವೇದಿಕೆ ಒದಗಿಸುವ ಮೂಲಕ, ಮಂಗಳೂರಿನ ಯಕ್ಷಾಭಿನಯ ಬಳಗ ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನಾರ್ಹ ಎಂದು ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಹೇಳಿದರು. ಅವರು ಮಂಗಳೂರು ಪುರಭವನದಲ್ಲಿ ಇದೇ ಜನವರಿ 13ರಂದು ನಡೆದ ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಅಣ್ಣಯ್ಯ ಕುಲಾಲ್, ಇಷ್ಟು ಜನ ಆಸಕ್ತರಿಗೆ ಯಕ್ಷಾಭ್ಯಾಸ ನೀಡುವ ಗುರು ಮಂಜುನಾಥ ಕುಲಾಲ್ ಅವರ ಸಾಧನೆ ಅನನ್ಯ ಎಂದರು.

ಇದೇ ಸಂದರ್ಭದಲ್ಲಿ ಗುರು, ಯಕ್ಷಶ್ರೀ ಐರೋಡಿ ಮಂಜುನಾಥ ಕುಲಾಲ್ ರಿಗೆ ಗುರುವಂದನೆ ಸಲ್ಲಿಸಲಾಯಿತು. ಯಕ್ಷಗಾನ ತರಬೇತಿಗೆ ಸ್ಥಳ ಒದಗಿಸಿದ ಬಿಜೈ ಕಾಪಿಕಾಡ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪಾವನ ಕೆ ಅವರನ್ನು, ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಭಾಗವತ ಪ್ರಸಾದ್ ಮೊಗೆಬೆಟ್ಟು, ಜನ್ಸಾಲೆ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು. ಯಕ್ಷಾಭಿನಯ ಬಳಗದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿ, ಸದಸ್ಯ ರಾಮಕೃಷ್ಣ ಮರಾಟೆ ವಂದಿಸಿದರು.‌ಅರೆಹೊಳೆ ಸದಾಶಿವ ರಾವ್ ನಿರೂಪಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಯಕ್ಷಾಭಿನಯ ಬಳಗದ ಸದಸ್ಯರಿಂದ, ಗುರು ಮಂಜುನಾಥ್ ಕುಲಾಲ್ ನಿರ್ದೇಶನದಲ್ಲಿ‌ ಅಭಿಮನ್ಯು ಕಾಳಗ ಮತ್ತು ಜಾಂಬವತಿ ಕಲ್ಯಾಣ ಪ್ರದರ್ಶನ‌ ನಡೆಯಿತು.‌ ಪ್ರದರ್ಶನಾರಂಭವನ್ನು ಯಕ್ಷಗಾನದ ಹಿರಿಯ ಕಲಾವಿದ ಮತ್ತು ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಯಕ್ಷಗಾನ ಕಲಾವಿದ ಸೀತಾರಾಮ‌ಕುಮಾರ್ ಕಟೀಲು, ವಿಮರ್ಶಕ‌ ಆರ್ ಎನ್ ನಾಯ್ಕ್ ಮತ್ತಿತರ ಗಣ್ಯರು ಉದ್ಘಾಟಿಸಿದರು.