ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಘಟಕ, ಐಕ್ಯುಎಸಿ ಮತ್ತು ತ್ರಿಶಾ ಕ್ಲಾಸಸ್, ಉಡುಪಿ ಇವರ ಸಹಯೋಗದೊಂದಿಗೆ ಅಂತಿಮ ವರ್ಷದ ಬಿ.ಕಾಂ., ಬಿ.ಎ. ವಿದ್ಯಾರ್ಥಿಗಳಿಗೆ “ಪ್ರೀಪೇರಿಂಗ್ ಫಾರ್ ಕಾರ್ಪೋರೇಟ್ ಜಾಬ್ಸ್” ಎಂಬ ಕಾರ್ಯಾಗಾರವನ್ನು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತ್ರಿಶಾ ಕ್ಲಾಸಸ್, ಮಂಗಳೂರು ವಿಭಾಗದ ಮುಖ್ಯಸ್ಥ ಪ್ರೊ. ಚಂದನ್ ರಾವ್ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವುದರೊಂದಿಗೆ ಕಾರ್ಪೋರೇಟ್ ವಲಯದಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯಗಳನ್ನು, ಜ್ಞಾನವನ್ನು ಹೇಗೆ ಪಡೆಯಬೇಕು ಎಂಬುದರ ಕುರಿತಾಗಿ ಸೂಕ್ತ ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಸಮೂಹ ಚರ್ಚೆ, ಅಣಕು ಸಂದರ್ಶನವನ್ನು ನಡೆಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಾರ್ಪೋರೇಟ್ ವಲಯದವರು ನಿರೀಕ್ಷಿಸುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಂಡು ಕಂಪನಿಗಳ ಉದ್ಯೋಗವನ್ನು ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹಿತವಚನ ನೀಡಿದರು.
ಉದ್ಯೋಗ ಮಾಹಿತಿ ಕೋಶದ ಸಂಚಾಲಕ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ದಿನೇಶ್ ಎಂ. ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಾಗಾರದ ಪ್ರಾಮುಖ್ಯತೆಯನ್ನು ತಿಳಿಸಿದರು.
ಉಡುಪಿ ಚೇಂಬರ್ ಆಫ್ ಕಾಮರ್ಸ್ನ ನಿರ್ದೇಶಕ ರಂಜಿತ್ ಪ್ರಭು, ಮಣಿಪಾಲ ಜೂನಿಯರ್ ಕಾಲೇಜಿನ ಉಪನ್ಯಾಸಕ ಪ್ರಭಾಕರ್ ಭಂಡಿ, ವಿದ್ಯಾರ್ಥಿ ಕ್ಷೇಮಪಾಲನಾ ಸಂಚಾಲಕಿ ಪ್ರೊ. ಸುಜಯಾ ಕೆ.ಎಸ್., ವಿದ್ಯಾರ್ಥಿ ಸಂಚಾಲಕ ಮನಮೋಹನ್ ಮತ್ತು ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಕಾಂಚನಾ ಸ್ವಾಗತಿಸಿದರು, ವಿದ್ಯಾರ್ಥಿ ಸಂಚಾಲಕಿ ಅನುಷಾ ನಿರೂಪಿಸಿದರು. ಉದ್ಯೋಗ ಮಾಹಿತಿ ಕೋಶ, ಸ್ನಾತಕೋತ್ತರ ವಿಭಾಗದ ಸಂಚಾಲಕ ಪ್ರೊ. ಆನಂದ ಎಂ. ಬಿ. ವಂದಿಸಿದರು.