ಮೂಡಬಿದಿರೆ : ಗಂಟಾಲಕಟ್ಟೆ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ (47) ಅವರು ನಿಧನರಾಗಿದ್ದಾರೆ. ಹಿರಿಯಡಕ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ವಾಮನ ಕುಮಾರ್ ಕಳೆದ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿಂದ ಯಕ್ಷಗಾನ ಪ್ರದರ್ಶನ ಮುಗಿಸಿ ಮಂಜಾನೆ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ.
ಪ್ರಸಂಗಕರ್ತ ಮನೋಹರ್ ಕುಮಾರ್ ಅವರಿಂದ ಪ್ರಭಾವಿತರಾಗಿ ಧರ್ಮಸ್ಥಳದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ಯಕ್ಷಗಾನದ ಹೆಜ್ಜೆ ಕಲಿತಿದ್ದರು. ಪ್ರಾರಂಭದಲ್ಲಿ ಧರ್ಮಸ್ಥಳ ಮೇಳ, ನಂತರ ನಾಲ್ಕು ವರ್ಷಗಳ ಕಾಲ ಕದ್ರಿ ಮೇಳ, 15 ವರ್ಷಗಳ ಕಾಲ ಮಂಗಳಾದೇವಿ ಮೇಳ, ಕಳೆದ 9 ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವೇಷಧಾರಿಯಾಗಿದ್ದು, ಮೇಳದ ಮ್ಯಾನೇಜರ್ ಆಗಿ ವಾಮನ ಕುಮಾರ್ ಅವರು ಸೇವೆ ಸಲ್ಲಿಸುತ್ತಿದ್ದರು. 16 ವರ್ಷಗಳ ಅನುಭವಿ ಕಲಾವಿದರಾಗಿದ್ದ ಹಾಸ್ಯ, ಸ್ತ್ರೀ, ಪುರುಷ, ಪುಂಡು ಹೀಗೆ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ.












