ಕೊರಗರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕೇಸು ದಾಖಲಿಸಿರುವ ಜಿಲ್ಲಾಡಳಿತದ ಕ್ರಮವನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಖಂಡಿಸಿದ್ದಾರೆ.
ದೇಶದ ಮೂಲ ನಿವಾಸಿಗಳಾದ ಕೊರಗರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್, ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿತ್ತು. ಆದರೂ ಕಾಂಗ್ರೆಸ್ ನಾಯಕರು ಸಹಿತ 22 ಜನರ ವಿರುದ್ಧ ಜಿಲ್ಲಾಡಳಿತ ಸುಳ್ಳು ಪ್ರಕರಣ ದಾಖಲಿಸಿದೆ. ಆದರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅನೇಕ ಕಾರ್ಯಕ್ರಮಗಳು ನಡೆಸಲಾಗುತ್ತಿದ್ದು, ಅದರ ವಿರುದ್ಧ ಯಾವುದೇ ಕೇಸು ದಾಖಲಿಸಿಲ್ಲ ಎಂದು ದೂರಿದ್ದಾರೆ.
ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನಾಂಗದ ಪರವಾಗಿ ಮಾಡಿದ ಪ್ರತಿಭಟನೆಗೆ ಕೇಸ್ ದಾಖಲಿಸಿದ್ದಾರೆ. ಬಿಜೆಪಿ ನಡೆಸುವ ಕಾರ್ಯಕ್ರಮಕ್ಕೆ ಯಾವುದೇ ಕ್ರಮಕೈಗೊಳ್ಳದೆ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ. ಈ ಮೂಲಕ ಜಿಲ್ಲಾಡಳಿತದ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.